ಜಮ್ಮು-ಕಾಶ್ಮೀರದಲ್ಲಿ ಅತಂತ್ರ, ಹರಿಯಾಣದಲ್ಲಿ 'ಕೈ' ಕೇಕೆ?

ವಿಜಯವಾಣಿ-1-1
Published on

ಮತದಾನೋತ್ತರ ಸಮೀಕ್ಷೆಗಳು ಪ್ರಕಟ | 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯದಲ್ಲಿ ಮೊದಲ ಚುನಾವಣೆ

ನವದೆಹಲಿ: ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಗಳ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, 10 ವರ್ಷಗಳ ನಂತರದ ಮೊದಲ ಚುನಾವಣೆಯಲ್ಲಿ ಕಣಿವೆ ಪ್ರದೇಶ ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗ ಬಹುದು ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು 7 ಸಮೀಕ್ಷೆಗಳು ವರದಿ ಮಾಡಿದ್ದು, 10 ವರ್ಷಗಳ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ.

ದೈನಿಕ್ ಭಾಸ್ಕರ್, ಇಂಡಿಯಾ ಟುಡೇ-ಸಿ ವೋಟರ್, ಪೀಪಲ್ಸ್ ಪಲ್ಸ್ ಮತ್ತು ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಗಳು ಕಾಂಗ್ರೆಸ್-ನ್ಯಾಷನಲ್ ಕಾನ್ಪರೆನ್ಸ್​ಗೆ ಸರ್ಕಾರ ರಚನೆ ಮಾಡುವ ಸಾಧ್ಯತೆಗಳ ಬಗ್ಗೆ ಹೇಳಿದ್ದರೆ, ಈ ಮೈತ್ರಿ ಸರಾಸರಿ ಕನಿಷ್ಠ 35 ಸ್ಥಾನಗಳನ್ನು ಗೆಲ್ಲಲಿವೆ ಎಂದಿದೆ. ಬಿಜೆಪಿ ಕನಿಷ್ಠ ಸರಾಸರಿ 20 ಸೀಟುಗಳನ್ನು ಗೆಲ್ಲಿಲಿದೆ ಎಂದಿರುವ ಸಮೀಕ್ಷೆಗಳು ಪಿಡಿಪಿ 4-7 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟಿವೆ.

election

2019ರ ಆಗಸ್ಟ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದುಗೊಳಿಸಿದ ನಂತರ ನಡೆದ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ. ಚುನಾವಣೆ ಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಚುನಾವಣೆ ಎದುರಿಸಿದರೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿ ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಇಡೀ ಚುನಾವಣೆಯಲ್ಲಿ ಸಣ್ಣಪುಟ್ಟ ಪಕ್ಷಗಳು ಗೆಲ್ಲುವ ಸೀಟುಗಳ ಮೇಲೆ ಎಲ್ಲರ ಕಣ್ಣಿದ್ದು, ಅವುಗಳು ನೀಡುವ ಬೆಂಬಲ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸುವುದು ನಿಶ್ಚಿತ.

exit poll

2014ರಲ್ಲಿ ಏನಾಗಿತ್ತು

2014ರ ಮತದಾನೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಎಂದೇ ವರದಿ ನೀಡಿದ್ದವು. ಆದರೆ ಜನಾದೇಶ ಬಿಜೆಪಿ, ಎನ್​ಸಿ ಮತ್ತು ಕಾಂಗ್ರೆಸ್​ಗಿಂತ ಪಿಡಿಪಿಗೆ ಹೆಚ್ಚು ಬಲ ನೀಡಿತು. 87 ಸದಸ್ಯ ಬಲದ ಸದನದಲ್ಲಿ ಯಾವುದೇ ಪಕ್ಷವೂ 44 ಸೀಟುಗಳ ಬಹುಮತದ ಸನಿಹ ಬರಲೇ ಇಲ್ಲ. ಪಿಡಿಪಿ 28, ಬಿಜೆಪಿ 25, ಎನ್​ಸಿ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗಳಿಸಿದ್ದವು. ಅಂತಿಮವಾಗಿ, ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೂ, 2 ವರ್ಷಗಳಲ್ಲಿ ಮೈತ್ರಿ ಮುರಿದುಬಿದ್ದಿತ್ತು.

ಕಾಶ್ಮೀರ ಲೆಕ್ಕಾಚಾರ

ಒಟ್ಟು ಮೂರು ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್-ನ್ಯಾಷನಲ್ ಸರಾಸರಿ ಕಾನ್ಪರೆನ್ಸ್ 43 ಸ್ಥಾನಗಳನ್ನು ಪಡೆದು ಅಧಿಕಾರದ ಹತ್ತಿರ ಬರಲಿವೆ ಎಂದಿದ್ದರೆ, ಬಿಜೆಪಿ ಅಂದಾಜು 26 ಸೀಟುಗಳೊಂದಿಗೆ ಸಣ್ಣ ಪಕ್ಷಗಳು ಅಥವಾ ಸ್ವತಂತ್ರರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಬಹುದು. ಆದರೆ, ಈ ಸಂಖ್ಯೆಗಳು ಬಹುಮತದ ನಂಬರ್ ಬಳಿ ತಲುಪಲು ಸಾಧ್ಯವಾಗುವುದೇ ಎಂಬ ಪ್ರಶ್ನೆಯನ್ನು ಸಮೀಕ್ಷೆಗಳು ಮುಂದಿಟ್ಟಿವೆ. ಬಿಜೆಪಿಯ ಮಾಜಿ ಮಿತ್ರ ಪಕ್ಷ, ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸರಾಸರಿ 8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಆದರೆ ಪಕ್ಷ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಜಾತ್ಯತೀತ ಮೈತ್ರಿ ಕಡೆಗೆ ಪಕ್ಷ ಆಸಕ್ತಿ ತೋರಿದಂತಿದೆ. ಇಂಡಿಯಾ ಟುಡೆ-ಸಿ ವೋಟರ್ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಸಣ್ಣಪುಟ್ಟ ಪಕ್ಷಗಳು (ಇತರೆ) 6-11, ಟೈಮ್ಸ್​ ನೌ 8-16, ದೈನಿಕ್ ಭಾಸ್ಕರ್ 12-18 ಮತ್ತು ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಂಸ್ಥೆ 8-16 ಸೀಟುಗಳನ್ನು ಗೆಲ್ಲಲಿವೆ ಎಂದು ವರದಿ ನೀಡಿವೆ. ಹೀಗಾಗಿ, ಸಂಸದ ರಶೀದ್ ಎಂಜಿನಿಯರ್ ನೇತೃತ್ವದ ಅವಾಮಿ ಇತ್ತೆಹಾದ್ ಪಾರ್ಟಿ, ಸಜದ್ ಲೋನ್ ನಾಯಕತ್ವದ ಜಮ್ಮು-ಕಾಶ್ಮೀರ್ ಪೀಪಲ್ಸ್ ಕಾನ್ಪರೆನ್ಸ್ ಪಕ್ಷಗಳು ಪಡೆಯುವ ಸೀಟುಗಳು ನಿರ್ಣಾಯಕ ಎನಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net