ಕರೆನ್ಸಿ ಕಣ್ಗಾವಲಿನಿಂದ ಭಾರತಕ್ಕೆ ವಿನಾಯ್ತಿ; ರೂಪಾಯಿ ಮೌಲ್ಯ ಚೇತರಿಕೆಗೆ ಅನುಕೂಲ

Nation
Published on

ವಾಷಿಂಗ್ಟನ್: ಅಮೆರಿಕದ ಹಣಕಾಸು ಇಲಾಖೆ ಭಾರತಸಹಿತ ಐದು ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರೆನ್ಸಿ ಕಣ್ಗಾವಲು ಪಟ್ಟಿಯಿಂದ (ಸಿಎಂಎಲ್) ತೆಗೆದು ಹಾಕಿದೆ. ಇಟಲಿ, ಮೆಕ್ಸಿಕೋ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಈ ಪಟ್ಟಿಯಿಂದ ಹೊರಬಂದ ಇತರ ನಾಲ್ಕು ದೇಶಗಳು. ಆಯಾ ದೇಶಗಳ ಕರೆನ್ಸಿಗಳ ಚಟುವಟಿಕೆಗಳು ಮತ್ತು ಅತಿಸೂಕ್ಷ್ಮ ಆರ್ಥಿಕ ನೀತಿಗಳ ಮೇಲೆ ಸಿಎಂಎಲ್ ನಿಗಾ ಇರಿಸುತ್ತದೆ. ಹಣಕಾಸು ಇಲಾಖೆ ಅಮೆರಿಕದ ಸಂಸತ್ತಿಗೆ ಸಲ್ಲಿಸಿರುವ ದ್ವೈವಾರ್ಷಿಕ ವರದಿ ಪ್ರಕಾರ ಚೀನಾ, ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ಸಿಂಗಾಪುರ ಮತ್ತು ತೈವಾನ್ ಪ್ರಸ್ತುತ ಈ ಪಟ್ಟಿಯಲ್ಲಿ ಉಳಿದುಕೊಂಡಿವೆ. ಪಟ್ಟಿಯಿಂದ ಹೊರ ಬಿದ್ದಿರುವ ದೇಶಗಳು ಮೂರು ಆರ್ಥಿಕ ಮಾನದಂಡಗಳ ಪೈಕಿ ಒಂದನ್ನು ಸತತ ಎರಡು ವರದಿಗಳಲ್ಲಿ ಪಾಲಿಸಿವೆ ಎಂದು ಹಣಕಾಸು ಇಲಾಖೆ ಹೇಳಿದೆ.

ನಿಗಾ ಏಕೆ?
ಮುಖ್ಯವಾಗಿ ಅಮೆರಿಕದ ವಿದೇಶಿ ವಿನಿಮಯ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ಇತರ ರಾಷ್ಟ್ರಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಥವಾ ಲಾಭ ಉದ್ಧೇಶಕ್ಕಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿವೆ ಎಂದು ಶಂಕಿಸಲಾದ ರಾಷ್ಟ್ರಗಳನ್ನು ಕರೆನ್ಸಿ ಕಣ್ಗ್ಗಾವಲು ಪಟ್ಟಿಗೆ ಸೇರ್ಪಡೆ ಮಾಡಿ ನಿಗಾ ವಹಿಸಲಾಗುತ್ತದೆ. ಜತೆಗೆ, ಸರಕು ಮತ್ತು ಸೇವೆಗಳಲ್ಲಿ ಅಮೆರಿಕದ ವಿದೇಶಿ ವಾಣಿಜ್ಯದ ಅಂದಾಜು ಶೇ.80 ಪಾಲು ಹೊಂದಿರುವ ಪ್ರಮುಖ ದೇಶಗಳ ನೀತಿಗಳನ್ನು ಹಣಕಾಸು ಇಲಾಖೆ ಪರಿಶೀಲಿಸುತ್ತದೆ.

ಪ್ರಯೋಜನಗಳು
ಅಮೆರಿಕದ ಸಿಎಂಎಲ್​ನಲ್ಲಿರುವ ದೇಶವನ್ನು ‘ಕರೆನ್ಸಿ ವಂಚಕ’ ಎಂದು ಪರಿಗಣಿಸಲಾಗುತ್ತದೆ. ಇದೀಗ ಪಟ್ಟಿಯಿಂದ ಹೊರಬಿದ್ದಿರುವುದು ಭಾರತಕ್ಕೆ ವರದಾನವಾಗಲಿದೆ. ‘ಸಿಎಂಎಲ್​ನಿಂದ ಭಾರತ ನಿರ್ಗಮಿಸಿರುವುದರಿಂದ ಈ ಹಣೆಪಟ್ಟಿಗೆ ಒಳಗಾಗದೆ ಆರ್​ಬಿಐ ವಿನಿಮಯ ದರಗಳನ್ನು ನಿಭಾಯಿಸಲು ಬಲವಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ’ ಎಂದು ಗ್ರಾಂಟ್ ಥಾರ್ನ್​ಟನ್ ಭಾರತ್​ನ ಪಾಲುದಾರ ವಿವೇಕ್ ಅಯ್ಯರ್ ಹೇಳಿದ್ದಾರೆ. ಮಾರುಕಟ್ಟೆ ದೃಷ್ಟಿಯಿಂದ ಇದು ದೊಡ್ಡ ಗೆಲು ವಾಗಿದೆ. ಜಾಗತಿಕ ಬೆಳವಣಿಗೆ ಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರದ ಮಹತ್ವವನ್ನು ಇದು ತೋರಿಸುತ್ತದೆ. ರೂಪಾಯಿ ಚೇತರಿಕೆಗೂ ಇದರಿಂದ ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net