

ಶೃಂಗೇರಿ: ತಾಯಿ ಸರಸ್ವತಿಗೆ ಎಲ್ಲ ಭಾಷೆಗಳು ಮಕ್ಕಳಿದ್ದಂತೆ. ಆದರೂ ಕನ್ನಡ ಭಾಷೆ ಅಂತರಂಗದ ಭಾಷೆ. ಈ ಭಾಷೆಯಿಂದ ನಾವು ಜಗತ್ತನ್ನು ಮುಟ್ಟಲು ಸಾಧ್ಯವಾಗುತ್ತದೆ. ಕನ್ನಡ ಭಾಷೆ ಸಂಸ್ಕೃತಿ, ಸಂಸ್ಕಾರದ ಶ್ರೇಷ್ಠತೆಗೆ ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಬಿಜಿಎಸ್ ಆವರಣದಲ್ಲಿ ಬುಧವಾರ ಪ್ರತಿಭಾ ಪುರಸ್ಕಾರ ಹಾಗೂ ಚುಂಚಶೃಂಗ ಕಲಾತಂಡದ ಸಾಂಸ್ಕೃತಿಕ ವೈಭವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಸ್ತಿತ್ವ ಚೇತೋಹಾರಿಯಾಗಿದೆ. ನಾಡು, ನುಡಿ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ಬೇರೆ ಭಾಷೆಗಳನ್ನು ಉತ್ಕೃಷ್ಟವಾಗಿ ಕಲಿತರೂ ತಾಯಿಬೇರನ್ನು ನಾವು ಮರೆಯಬಾರದು. ಬೇರೆ ದೇಶದಲ್ಲಿ ಅನ್ಯಭಾಷೆಗಳ ಪ್ರಭಾವವಿದೆ. ಹಾಗಾಗಿ ಅವರು ಸಂಸ್ಕೃತಿಯನ್ನು ಪಾಲಿಸದೆ ಪಾಲಕರನ್ನು ಮರೆಯುತ್ತಿದ್ದಾರೆ ಎಂದರು.
ಕುವೆಂಪು ಮೊದಲು ಆಂಗ್ಲ ಭಾಷೆಯ ಸಾಹಿತ್ಯವನ್ನು ಓದಿ ತಮ್ಮೊಳಗಿನ ಚಿಂತನೆಗಳನ್ನೂ ಹೆಚ್ಚಿಸಿಕೊಂಡರೂ ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮಹೋನ್ನತ ವ್ಯಕ್ತಿ. ಆಧ್ಯಾತ್ಮಿಕ, ವೈಜ್ಞಾನಿಕ ವಿವೇಚನೆಗಳನ್ನು ಬೆಳೆಸಿಕೊಂಡರೂ ಅವರ ಅಂತಃಕರಣ ಪರಿಶುದ್ಧವಾಗಿತ್ತು. ಆತ್ಮಜ್ಞಾನದ ಸಾಕ್ಷಾತ್ಕಾರವೇ ಬದುಕಿನ ಗುರಿ ಎಂದು ನಂಬಿದ್ದ ಕುವೆಂಪು ಮೂಢನಂಬಿಕೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮತೀಯ ದೋಷದ ಕೊಳೆ ನಿರ್ಮೂಲನೆ ಆಗಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು. ಅಲ್ಲಿ ಕೊಳೆತಿರುವ ನಕಾರಾತ್ಮಕ ಯೋಚನೆಗಳನ್ನು ನಾವು ಕಿತ್ತು ಬಿಸಾಡಬೇಕು. ಎಲ್ಲ ಬಂಧನಗಳನ್ನು ಕಳಚಿಕೊಂಡು ಆತ್ಮದ ಜತೆ ಅನುಸಂಧಾನ ಮಾಡುವುದೇ ನಿಜವಾದ ಜೀವನ ದರ್ಶನ. ಭಗವಂತನ ಪ್ರೇರಣೆ ಜತೆ ಮಾನವನ ಪ್ರಯತ್ನ ಅತಿಮುಖ್ಯ. ಜಾತಿ, ಧರ್ಮ, ಪಂಥಗಳ ಬಂಧನಗಳಿಂದ ಬಿಡುಗಡೆಗೊಂಡು ಮಾನವೀಯತೆಯಿಂದ ಬದುಕುವುದೇ ನಿಜವಾದ ಧರ್ಮ ಎಂಬುದು ಕುವೆಂಪು ಅವರ ಮುಖ್ಯ ವಿಚಾರಧಾರೆಯಾಗಿತ್ತು ಎಂದು ಹೇಳಿದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಶ್ರೀ ಗುಣನಾಥ ಸ್ವಾಮೀಜಿ, ವಿವಿಧ ಮಠದ ಶ್ರೀ ರಮಣಾನಂದ ಸ್ವಾಮೀಜಿ, ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ತಾಲೂಕು ಒಕ್ಕಲಿಗರ ಸಂಘದ ಡಿ.ಸಿ.ಶಂಕರಪ್ಪ, ಸಿಡಿಪಿಒ ಎನ್.ಜಿ.ರಾಘವೇಂದ್ರ ಇತರರಿದ್ದರು.