

ಬೆಂಗಳೂರು: ಇಂದು ಇಬ್ಬರು ಪ್ರಧಾನಿ ಪಟ್ಟಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತಕಡೆ ಪ್ರಧಾನಿ ಮೋದಿ ತಮ್ಮ ಪ್ರಹ್ಲಾದ್ ಮೋದಿ ಕಿಡ್ನಿ ವೈಫಲ್ಯದಿಂದ ಚೆನ್ನೈ ಆಸ್ಪತ್ರೆಗೆ ದಾಖಲಾದರೆ ಇತ್ತ ಮಾಜಿ ಪ್ರಧಾನಿ ದೇವೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವೇಗೌಡರು ಆಸ್ಪತ್ರೆಗೆ ತೆರಳುವ ಬಗ್ಗೆ ಬೆಳಿಗ್ಗೆ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದರು.
ದೇವೇಗೌಡರು ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಬಂದ ಬಳಿಕ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದರು. ದೇವೇಗೌಡರ ಆರೋಗ್ಯ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ತಿಳಿಸಿದ್ದರು.
ದೇವೇಗೌಡರು ಆಸ್ಪತ್ರೆ ದಾಖಲಾಗಿರುವ ವಿಚಾರವಾಗಿ ಮಾತನಾಡಿರುವ ಸಿಎಂ ಇಬ್ರಾಹಿಂ 'ಅವರಿಗೆ ಕಾಲು, ಮಂಡಿ ನೋವಿದೆ, ಮನೆಯಲ್ಲಿ ರೆಸ್ಟ್ ಸಿಗುತ್ತಿಲ್ಲ. ಅವರು ನಾನು ಪ್ರವಾಸಕ್ಕೆ ಹೋಗಲೇ ಬೇಕು ಎನ್ನುತ್ತಿದ್ದಾರೆ. ಅವರನ್ನು ಭೇಟಿಯಾಗಲು ಜನ ಬಂದು ಹೋಗುವವರು ಹೆಚ್ಚಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿ ಇದ್ದರೆ ಒಳ್ಳೆಯದು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಬಹುದು ಅಂತ ಅಷ್ಟೆ.
ನಾನು ಪ್ರವಾಸದಲ್ಲಿ ಇದ್ದೇನೆ, ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲು ಆಗಿಲ್ಲ. ಆಸ್ಪತ್ರೆ ವರದಿ ನೋಡಿದ ಬಳಿಕ ಮಾತನಾಡುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.