

ಬೆಂಗಳೂರು: ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ನಡೆದ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದ ಎಲ್ಲಾ ಮಹಿಳೆಯರು ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಅದಕ್ಕೂ ಮೊದಲು ನಾವು ಏನೂ ಹೇಳುವುದಿಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣವನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಮಾಜಿ ಸಚಿವ ಸುನಿಲ್ ಕುಮಾರ್ ಕಾರ್ಕಳ ಟ್ವೀಟ್ ಮಾಡಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್‌ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ನಡೆದ ಸಭೆಯ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಅದಕ್ಕೂ ಮೊದಲು ನಾವು ಏನೂ ಹೇಳುವುದಿಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣವನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ. ನಾವು ಪ್ರಣಾಳಿಕೆಯಲ್ಲಿ ಯಾವುದೇ ನಿಯಮಗಳನ್ನು ಹೇಳಿಲ್ಲ. ಹೀಗಾಗಿ ಎಲ್ಲ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ನಾಳೆ ಮುಖ್ಯಮಂತ್ರಿಗಳ ಜತೆ ಸಭೆ ಇದೆ. ಆ ಬಳಿಕ ಎಲ್ಲವು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
4 ನಿಗಮಗಳ ಎಂಡಿಗಳ ಜತೆ ಸಭೆ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿ ಕುರಿತ ಮಾಹಿತಿ ಲಭಿಸಿದೆ. ಕೋವಿಡ್ ಸಂದರ್ಭದಲ್ಲಿ ನಷ್ಟದ ಕುರಿತ ಮಾಹಿತಿ ಲಭಿಸಿದೆ. ನೇಮಕಾತಿ ಆಗದಿರುವುದು ಮತ್ತು ಬಸ್‌ಗಳ ಖರೀದಿ ಬಗ್ಗೆ ಚರ್ಚೆ ಆಗಿದೆ. ನಾಲ್ಕು ನಿಗಮಗಳಲ್ಲಿ 23978 ವಾಹನಗಳಿವೆ. 1,04,650 ಸಿಬ್ಬಂದಿ ಇದ್ದಾರೆ. 4449 ಬಸ್‌ಗಳು ಹೊಸದಾಗಿ ಸೇರ್ಪಡೆಯಾಗಲಿದೆ. 82 ಲಕ್ಷ 51 ಸಾವಿರ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಎಂಡಿಗಳು ಇಂದು 3 ರಿಂದ 4 ಆಯ್ಕೆಗಳನ್ನು ತಿಳಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಭರವಸೆ ನೀಡಿದರು.
ನಾಳೆ 12ಕ್ಕೆ ಸಿಎಂ ಜತೆ ಸಭೆ ಇದೆ. ನಾಳೆ ಉಚಿತ ಪ್ರಯಾಣವನ್ನು ಸಿಎಂ ಫೈನಲ್ ಮಾಡ್ತಾರೆ. ಯಾವುದೇ ನಿರ್ಬಂಧವಿಲ್ಲದೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡುತ್ತೇವೆ. ಬಿಜೆಪಿಯವರ ಹತ್ತಿರ ನಾವು ಹೇಳಿಸಿಕೊಳ್ಳಬೇಕಿಲ್ಲ. ಅವರು ಪ್ರತಿಭಟನೆ ಮಾಡುವುದಕ್ಕೆ ಅವಕಾಶವೇ ನೀಡೋದಿಲ್ಲ ಎಂದು ಹೇಳಿದರು.