

ಬೆಂಗಳೂರು: ರಾಜ್ಯದ ಎಲ್ಲಾ ಮಹಿಳೆಯರು ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಇಂದು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ನಡೆದ ಸಭೆಯ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಅದಕ್ಕೂ ಮೊದಲು ನಾವು ಏನೂ ಹೇಳುವುದಿಲ್ಲ. ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣವನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ. ನಾವು ಪ್ರಣಾಳಿಕೆಯಲ್ಲಿ ಯಾವುದೇ ನಿಯಮಗಳನ್ನು ಹೇಳಿಲ್ಲ. ಹೀಗಾಗಿ ಎಲ್ಲ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ನಾಳೆ ಮುಖ್ಯಮಂತ್ರಿಗಳ ಜತೆ ಸಭೆ ಇದೆ. ಆ ಬಳಿಕ ಎಲ್ಲವು ಗೊತ್ತಾಗಲಿದೆ ಎಂದರು.
4 ನಿಗಮಗಳ ಎಂಡಿಗಳ ಜತೆ ಸಭೆ ಮಾಡಲಾಗಿದೆ. ಆರ್ಥಿಕ ಪರಿಸ್ಥಿತಿ ಕುರಿತ ಮಾಹಿತಿ ಲಭಿಸಿದೆ. ಕೋವಿಡ್ ಸಂದರ್ಭದಲ್ಲಿ ನಷ್ಟದ ಕುರಿತ ಮಾಹಿತಿ ಲಭಿಸಿದೆ. ನೇಮಕಾತಿ ಆಗದಿರುವುದು ಮತ್ತು ಬಸ್ಗಳ ಖರೀದಿ ಬಗ್ಗೆ ಚರ್ಚೆ ಆಗಿದೆ. ಇಡೀ ದೇಶದಲ್ಲೇ ಒಳ್ಳೆಯ ಸಂಸ್ಥೆಗಳು ಇವು. 350 ರಿಂದ 400 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ ಎಂದರು.
4 ನಿಗಮಗಳಲ್ಲಿ 23978 ವಾಹನಗಳಿವೆ. 1,04,650 ಸಿಬ್ಬಂದಿ ಇದ್ದಾರೆ. 4449 ಬಸ್ಗಳು ಹೊಸದಾಗಿ ಸೇರ್ಪಡೆಯಾಗಲಿದೆ. 82 ಲಕ್ಷ 51 ಸಾವಿರ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಎಂಡಿಗಳು ಇಂದು 3 ರಿಂದ 4 ಆಯ್ಕೆಗಳನ್ನು ತಿಳಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದು ಭರವಸೆ ನೀಡಿದರು.
ನಾಳೆ 12ಕ್ಕೆ ಸಿಎಂ ಜತೆ ಸಭೆ ಇದೆ. ನಾಳೆ ಉಚಿತ ಪ್ರಯಾಣವನ್ನು ಸಿಎಂ ಫೈನಲ್ ಮಾಡ್ತಾರೆ. ಯಾವುದೇ ನಿರ್ಬಂಧವಿಲ್ಲದೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡುತ್ತೇವೆ. ಬಿಜೆಪಿಯವರ ಹತ್ತಿರ ನಾವು ಹೇಳಿಸಿಕೊಳ್ಳಬೇಕಿಲ್ಲ. ಅವರು ಪ್ರತಿಭಟನೆ ಮಾಡುವುದಕ್ಕೆ ಅವಕಾಶವೇ ನೀಡೋದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)