

ಬೆಂಗಳೂರು: ಬಿಜೆಪಿ ಸರ್ಕಾರ ಬಂದಾಗಿನಿಂದ ವಿಧಾನಸಭೆಯಲ್ಲಿ ಮೊದಲ ಎರಡು ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಹಲವರ ಸ್ಥಾನ ಇದೀಗ ಬದಲಾಗಿದೆ. ಫ್ರಂಟ್ ಬೆಂಚರ್ ಎನಿಸಿಕೊಂಡವರು ಕೊನೇ ಸಾಲಿಗೆ ವರ್ಗವಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊನೇ ಸಾಲಿನ ಎರಡನೇ ಆಸನದಲ್ಲಿ ಕುಳಿತರೆ, ಮಂತ್ರಿ ಸ್ಥಾನ ಕಳೆದುಕೊಂಡ ಸುರೇಶ್ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ ಕೂಡ ಕೊನೆಯ ಎರಡು ಸಾಲುಗಳಲ್ಲಿ ಕೂರುವಂತಾಗಿದೆ. ಅದೇ ರೀತಿ ಶಾಸಕಾಂಗ ಪಕ್ಷದ ನಾಯಕ ಬಸವರಾಜ ಬೊಮ್ಮಾಯಿ ಮೊದಲ ಸಾಲಿನ ಮೊದಲಿಗರಾಗಿ ಅವಕಾಶ ಪಡೆದುಕೊಂಡರು. ವಿಶೇಷವೆಂದರೆ, 33 ವರ್ಷದ ಹಿಂದೆ ತಮ್ಮ ತಂದೆ ಆಸೀನರಾಗಿದ್ದ ಆಸನದಲ್ಲಿ ಬಸವರಾಜ ಬೊಮ್ಮಾಯಿ ಕುಳಿತು ಆಡಳಿತ ಪಕ್ಷವನ್ನು ಮುನ್ನೆಡೆಸಿದರು. ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಕಾನೂನು ಮತ್ತು ಸಂಸದೀಯ ಖಾತೆ ಕಳೆದುಕೊಂಡು ಎರಡನೇ ಸಾಲಿಗೆ ವರ್ಗವಾಗಿದ್ದ ಮಾಧುಸ್ವಾಮಿ ಇದೀಗ ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಅದೇ ಖಾತೆ ಪಡೆದುಕೊಳ್ಳುವ ಮೂಲಕ ಮೊದಲ ಸಾಲಿಗೆ ಬಂದಿದ್ದಾರೆ. ಜತೆಗೆ ಸಿಎಂ ಅನುಪಸ್ಥಿತಿಯಲ್ಲಿ ಮುನ್ನಡೆಸುತ್ತಾರೆ.
ಗೈರು: ಮೊದಲ ದಿನದ ಕಲಾಪದಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿ ಆಡಳಿತ ಪಕ್ಷದ ಇಬ್ಬರು ಶಾಸಕಿಯರು ಗೈರಾಗಿದ್ದರು.
ಕಲಾಪಕ್ಕೆ ಮುನ್ನ ಬಿಎಸ್ವೈ ಆಶೀರ್ವಾದ ಪಡೆದ ಸಿಎಂ: ಮುಖ್ಯಮಂತ್ರಿಯಾಗಿ ಮೊದಲ ವಿಧಾನಸಭೆ ಅಧಿವೇಶನ ಎದುರಿಸುತ್ತಿರುವ ಬಸವರಾಜ ಬೊಮ್ಮಾಯಿ ಸೋಮವಾರ ಕಲಾಪ ಆರಂಭಕ್ಕೆ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಆಡಳಿತ ಪಕ್ಷದ ಮೊಗಸಾಲೆಯಲ್ಲಿದ್ದ ಬಿಎಸ್ವೈ ಭೇಟಿಯಾದ ಸಿಎಂ, ಸಹಕಾರ ಕೊಡುವಂತೆ ಕೋರಿದರು. ಇದೇ ವೇಳೆ ಹಲವು ಸಚಿವರು ಬಿಎಸ್ವೈ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದು ಕಾಣಿಸಿತು.
ಸದನದಲ್ಲಿ ಮುಖ್ಯ ಸಚೇತಕರ ಪಕ್ಕದಲ್ಲಿ ಕೂರುವ ಅವಕಾಶ ಕೊಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದೆ, ಅದೇ ರೀತಿಯಲ್ಲಿ ಅವಕಾಶ ಕೊಟ್ಟಿದ್ದಾರೆ.
| ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಸಲುವಾಗಿ ಪಕ್ಷದ ರಾಜ್ಯಾಧ್ಯಕ್ಷರ ಜತೆ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಶಾಸಕನಾಗಿ ಕೆಲಸ ಮಾಡಲು ನನಗೆ ಯಾವ ಮುಜುಗರವೂ ಇಲ್ಲ. ಕೆಲಸ ಮಾಡಲು ಮುಖ್ಯಮಂತ್ರಿ ಹುದ್ದೆಯೇ ಬೇಕಾಗಿಲ್ಲ. ಸಿಎಂ ಸ್ಥಾನಕ್ಕೆ ಸಂತೋಷದಿಂದಲೇ ರಾಜೀನಾಮೆ ನೀಡಿದ್ದೇನೆ. ಆ ವಿಚಾರದಲ್ಲಿ ನನ್ನ ಮೇಲೆ ಯಾವುದೇ ಒತ್ತಡವೂ ಇರಲಿಲ್ಲ ಎಂದರು. ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರ ಏನಾದರೂ ಸಲಹೆ ಕೇಳಿದರೆ ಕೊಡುತ್ತೇನೆ. ಸರ್ಕಾರದ ಒಳ್ಳೆಯ ಕೆಲಸವನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು. ಮುಂದಿನ ಬಾರಿ ಸಿದ್ದರಾಮಯ್ಯ ಅಕಸ್ಮಾತಾಗಿ ಗೆದ್ದರೂ ಅವರನ್ನು ವಿರೋಧ ಪಕ್ಷದಲ್ಲಿಯೇ ಕೂರಿಸುವ ವಿಶ್ವಾಸ ವ್ಯಕ್ತಪಡಿಸಿದರು.