

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಸರ್ಕಾರದಲ್ಲಿ 65% ಕಮಿಷನ್ ಕೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿ ಭ್ರಷ್ಟಾಚಾರ ಸಹಿಸದೇ ಇದ್ದರೇ ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಗುತ್ತಿಗೆದಾರರ ಬಿಲ್ ಬಿಡುಗಡೆಗೆ ಸೂಚಿಸಬೇಕು. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್ ನ ಎಟಿಎಂ ಎನ್ನುವುದು ಸಾಬೀತಾದಂತೆ ಎಂದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನೂ ಭೇಟಿ ಮಾಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಅವರು ಮಾಡಿರುವ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಆಗ್ರಹಿಸಲು ವಿನಂತಿಸಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ನಾನು ಸಿಎಂ ಆಗಿದ್ದಾಗ ಬಿಲ್ ಪಾವತಿಗೆ ಆನ್ಲೈನ್ ಮಾಡಿ ಸ್ಟ್ರೀಮ್ ಲೈನ್ ಮಾಡಿದ್ದೆ. ಹಿರಿತನದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಅವರ ಬಾಕಿ ಕೂಡ ಕಡಿಮೆ ಉಳಿದಿತ್ತು. ಗುತ್ತಿಗೆದಾರರು ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಈಗ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಲ್ಲ ಇಲಾಖೆಗಳಲ್ಲಿ ಹಿಂದಿನ ಸರ್ಕಾರದ ಅವಧಿಯ ಕಾಮಗಾರಿಗಳಿಗೆ ಲಂಚ ಕೇಳುತ್ತಿರುವುದು ಸರ್ವವಿಧಿತವಾಗಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಮೌನ ವಹಿಸಿದ್ದಾರೆ. ಇದು ಅವರ ಸಮ್ಮತಿ ಅಂತ ಸೂಚಿಸುತ್ತದೆ. ಸಿಎಂ ವರ್ಗಾವಣೆಗೆ ಹಣ ಪಡೆದಿಲ್ಲ ಅಂತ ಹೇಳಿದ್ದಾರೆ. ಆದರೆ, ಅವರ ಕಚೇರಿಯಿಂದ ವರ್ಗಾವಣೆ ಆಗಿರುವ ಆದೇಶಗಳು ಯಾಕೆ ಬದಲಾವಣೆ ಆಗುತ್ತಿವೆ. ನಮ್ಮ ಅವಧಿಯಲ್ಲಿ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು 3 ಜನರ ಸಮಿತಿ ರಚನೆ ಮಾಡಿದ್ದೆವು. ಆ ಆದೇಶಗಳನ್ನು ಈಗ ಪಾಲನೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಡಿ. ಕೆ ಶಿವಕುಮಾರ್ ಸೂಪರ್ ಸಿಎಂ ಆಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಟ್ರಾನ್ಸಫರ್ ತನ್ನ ಗಮನಕ್ಕೆ ತಂದು ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಡಿ. ಕೆ.ಶಿವಕುಮಾರ್ ಸೂಪರ್ ಸಿಎಂ ಆಗಿದ್ದಾರೆ.ರಾಜ್ಯದಲ್ಲಿ ಸಿಎಂ ಮತ್ತು ಸೂಪರ್ ಸಿಎಂ ಇಬ್ಬರು ಇದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಚಾಟಿ ಬೀಸಿದ್ದಾರೆ.
ಸರ್ಕಾರದ ವಿರುದ್ದ ಬರುವ ಎಲ್ಲ ಪತ್ರಗಳೂ ಫೇಕ್ ಎಂದು ಸರ್ಕಾರ ಅಲ್ಲಗಳೆಯುತ್ತಿದೆ. ಅವರದೇ ಪಕ್ಷದ ಶಾಸಕರು ಬರೆದ ಪತ್ರವನ್ನೂ ಫೇಕ್ ಎನ್ನುತ್ತಾರೆ. ಈ ಸರ್ಕಾರವೇ ಫೇಕ್ ಎಂದು ಆರೋಪಿಸಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಆಗಸ್ಟ್ 15 ರ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪಕ್ಷದ ಹೈಕಮಾಂಡ್ ತಿಳಿಸಿದೆ. ನಾನು ಸಂಸತ್ ಅಧಿವೇಶನ ಸಂದರ್ಭದಲ್ಲಿ ಸಂಸದರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ, ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ಪಕ್ಚದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ಮಾಡಿದ್ದೇನೆ.
ಲೋಕಸಭೆ ಚುನಾವಣೆ ಸಿದ್ದತೆ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಸರ್ಕಾರದ ಬಗ್ಗೆ ಜನರ ಅಭಿಪ್ರಾಯ, ಸರ್ಕಾರದ ವಿರುದ್ದ ಮುಂದಿನ ಹೋರಾಟದ ಕುರಿತು ಚರ್ಚೆ ಮಾಡಿದ್ದೇವೆ. ಶೀಘ್ರವೇ ರಾಜ್ಯ ಸರ್ಕಾರದ ಎಲ್ಲ ವೈಫಲ್ಯಗಳ ವಿರುದ್ದ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.