

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ ಪ್ರವೇಶಿಸಲು ಇನ್ನು ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಆನ್ಲೈನ್ನಲ್ಲಿ ಸುಸ್ವಾಗತಂ ಪೋರ್ಟಲ್ಅನ್ನು ಆರಂಭಿಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ. ಚಂದ್ರಚೂಡ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐದು ಸದಸ್ಯರ ಪೀಠವು ಪೋರ್ಟಲ್ ಆರಂಭಿಸುವುದಾಗಿ ಘೋಷಿಸಿದೆ.
ಸುಸ್ವಾಗತಂ ವೆಬ್ ಪೋರ್ಟಲ್ ಮೊಬೈಲ್ ಸ್ನೇಹಿಯಾಗಿದ್ದು, ವಿಚಾರಣೆಗೆ ಹಾಜರಾಗಲು, ವಕೀಲರನ್ನು ಭೇಟಿ ಮಾಡಲು ಹಾಗೂ ವಿವಿಧ ಉದ್ದೇಶಗಳಿಗೆ ಸುಪ್ರೀಂ ಕೋರ್ಟ್ಗೆ ಬರುವವರು ಇದರ ಮೂಲಕ ಪಾಸ್ಗಳನ್ನು ಪಡೆಯಬಹುದಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ.
ಸುಸ್ವಾಗತಂ ಪೋರ್ಟಲ್ಅನ್ನು ಜುಲೈ 25ರಂದು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆಗಸ್ಟ್ 9ರವರೆಗೆ ಪೋರ್ಟಲ್ ಮೂಲಕ 10 ಸಾವಿರ ಪಾಸ್ಗಳನ್ನೂ ವಿತರಿಸಲಾಗಿದೆ. ಇನ್ನು ಮುಂದೆ ಪಾಸ್ಗಳಿಗಾಗಿ ಜನರು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಎಲ್ಲರಿಗೂ ಆನ್ಲೈನ್ ಮೂಲಕವೇ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಪೋರ್ಟಲ್ಅನ್ನು ಹೇಗೆ ಬಳಕೆ ಮಾಡಬೇಕೆಂಬ ಕುರಿತು ವಿಡಿಯೋ ಪ್ರಾತ್ಯಕ್ಷಿಕೆ ಲಭ್ಯವಿದ್ದು, ಅದನ್ನು ನೋಡಿ ಎಲ್ಲರೂ ತಿಳಿದುಕೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ. ಚಂದ್ರಚೂಡ್ ಸುಸ್ವಾಗತಂ ಕುರಿತು ತಿಳಿಸಿದ್ದಾರೆ.