

ಮೀರತ್: ಹೋಟೆಲ್ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಾಜಿ ಸಂಸದ ಶಾಹಿದ್ ಅಬ್ಲಾಕ್ ಪುತ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಳಿಕ ಮನೆ ಮೇಲೆ ದಾಳಿ ನಡೆಸಿ ಆತನನ್ನು ಕರೆದೊಯ್ದಿರುವ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ.
ಡ್ಯಾನಿಶ್ ಒಂಟಿಯಾಗಿ ನಟಿಸುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ದೆಹಲಿ ಮೂಲದ ಹಿಂದೂ ಯುವತಿಯೊಬ್ಬಳ ಜತೆ ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರವೆಸಗುವ ನೆಪದಲ್ಲಿ ಮೀರತ್‌ನ ಹೋಟೆಲ್‌ಗೆ ಕರೆಸಿಕೊಂಡಿದ್ದ ಎಂದು ಆರೋಪಿಸಲಾಗಿದ್ದು, ಯುವತಿಯೇ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯು ಆಗಸ್ಟ್ 20ರಂದು ಯುವತಿಯನ್ನು ಹೋಟೆಲ್ ಕರೆಯಿಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಅಶ್ಲೀಲ ವಿಡಿಯೋಗಳನ್ನೂ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಆರೋಪಿ ಡ್ಯಾನಿಶ್ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದಾನೆ ಎಂದು ಹೇಳಲಾಗಿದ್ದು ಅನುಮಾನ ಬಂದ ಮೇಲೆ ಆಕೆ ಆರೋಪಿಯ ಮೊಬೈಲ್ ಪರಿಶೀಲಿಸಿ ವಿಡಿಯೋ ಸಿಕ್ಕ ಬಳಿಕ ಅದನ್ನು ಡಿಲೀಟ್ ಮಾಡಿದ್ದಾಳೆ. ಈ ವೇಳೆ ಆರೋಪಿಯ ಪತ್ನಿ ಹಾಗೂ ಮಗಳ ಫೋಟೋವನ್ನೂ ನೋಡಿ ಈ ಬಗ್ಗೆ ಆರೋಪಿಯನ್ನು ಪ್ರಶ್ನಿಸಿದಾಗ ಆತ ಆ ಬಗ್ಗೆ ಏನು ಹೇಳದೆ ಸುಮ್ಮನಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಜತೆಗೆ ಘಟನೆ ನಡೆದ ದಿನವೇ ಪೊಲೀಸರಿಗೆ ದೂರು ನೀಡಿದ್ದರೂ ವಿಚಾರಣೆ ನಡೆದಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದು, ಕೊನೆಗೆ ಮತ್ತೆ ಆಗಸ್ಟ್ 23ರಂದು ಎಸ್. ಎಸ್. ಪಿಗೆ ದೂರು ನೀಡಿದ ಬಳಿಕ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಳಿಕ ಪೊಲೀಸರ ಕೈಗೂ ಕೆಲ ಮಹತ್ವದ ಸುಳಿವು ಸಿಕ್ಕಿವೆ ಎನ್ನಲಾಗಿದೆ.(ಏಜೆನ್ಸೀಸ್)