ಪರಿಸರ ರಕ್ಷಣೆ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳಿ

sgr
ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮೈತ್ರಿ ಪಾಟೀಲ್, ಸುಭಾಷ್ ಕೌತಳ್ಳಿ, ಸವಿತಾ ವಾಸು, ಎಸ್.ಬಸವರಾಜ್, ಹರೀಶ್ ಇತರರಿದ್ದರು.
Published on

ಸಾಗರ: ಪರಿಸರ ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಸ್ವಯಂಪ್ರೇರಿತರಾಗಿ ಪರಿಸರ ಉಳಿಸುವ, ಜಾಗೃತಿ ಮೂಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.

ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ನೇತಾಜಿ ಸುಭಾಷ್‌ಚಂದ್ರ ಬೋಸ್ ಯುವ ಟ್ರಸ್ಟ್‌ನಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಪೋಷಿಸುವ ಕೆಲಸವನ್ನು ಟ್ರಸ್ಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೆಸರಿನಲ್ಲಿ ಗಿಡನೆಟ್ಟು ಪೋಷಿಸಲು ಕರೆ ನೀಡಿದ್ದಾರೆ. ಪ್ರತಿಯೊಬ್ಬರೂ ತಾಯಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಅದೇ ರೀತಿ ಪರಿಸರವನ್ನು ಸಹ ಪ್ರೀತಿಸಿ, ಪೂಜಿಸುವಂತಾಗಬೇಕು ಎಂದು ಹೇಳಿದರು.

ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಮಾತನಾಡಿ, ಪರಿಸರ ಉಳಿಸುವುದು ನಮ್ಮ ಆದ್ಯತೆ ಆಗಬೇಕು. ಪರಿಸರ ಉಳಿಸುವ ಕೆಲಸ ಕೇವಲ ಸರ್ಕಾರ, ಇಲಾಖೆಗಳದ್ದು ಮಾತ್ರವಲ್ಲ. ನಾವು ಕೂಡ ಸಂಕಲ್ಪ ಮಾಡಬೇಕು. ನೇತಾಜಿ ಟ್ರಸ್ಟ್ ಮಾಡುತ್ತಿರುವ ಪರಿಸರ ಸೇವೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಪ್ರಥಮ ದರ್ಜೆ ಕಾಲೇಜನ್ನು ಗ್ರೀನ್ ಕ್ಯಾಂಪಸ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಸುಭಾಷ್ ಕೌತಳ್ಳಿ ಮಾತನಾಡಿ, 15 ವರ್ಷಗಳಿಂದ ಪರಿಸರ ರಕ್ಷಣೆ ಸಂಬಂಧಿ ಕೆಲಸ ಮಾಡುತ್ತಿದ್ದೇವೆ. ಗಿಡ ನೆಟ್ಟು ಮೂರು ವರ್ಷ ಅದನ್ನು ಪಾಲನೆ ಮಾಡುತ್ತೇವೆ. ಪ್ರತಿವರ್ಷ ಗಿಡದ ಹುಟ್ಟುಹಬ್ಬ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಯಾರಿಂದಲೂ ಹಣ ಪಡೆಯದೆ ನಮ್ಮ ದುಡಿಮೆಯ ದುಡ್ಡಿನಲ್ಲಿ ಪರಿಸರ ದಿನವನ್ನು ಆಚರಿಸುತ್ತೇವೆ ಎಂದು ತಿಳಿಸಿದರು.

ಹೊಸನಗರ ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಎಸ್.ಬಸವರಾಜ್, ಹರೀಶ್, ಕಾಂತೇಶ್, ಅನಿಲ್ ಬರದವಳ್ಳಿ, ರಮಾಕಾಂತ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net