ದೇಗುಲಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ

sgr (10)
ಸಾಗರದ ಭೀಮನಕೋಣೆ ರಸ್ತೆಯ ಪ್ರಸಾದ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಆನಂದ ಗೌಡ, ಬಸವರಾಜ್, ಮೈತ್ರಿ ಪಾಟೀಲ್, ಸವಿತಾ ವಾಸು ಇತರರಿದ್ದರು.
Published on

ಸಾಗರ: ಶ್ರದ್ಧಾಭಕ್ತಿಯ ಕೇಂದ್ರಗಳ ಅಭಿವೃದ್ಧಿಗೆ ಸಾರ್ವಜನಿಕರೂ ಕೈಜೋಡಿಸಬೇಕು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಭೀಮನಕೋಣೆ ರಸ್ತೆಯ ಗಾಂಧಿನಗರ ನಾಗರಿಕ ಸಮಿತಿಯಿಂದ ಏರ್ಪಡಿಸಿದ್ದ ಪ್ರಸಾದ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೀಮನಕೋಣೆ ರಸ್ತೆಯನ್ನು ಅಗಲೀಕರಣಗೊಳಿಸಲು ಸರ್ಕಾರ 5.50 ಕೋಟಿ ರೂ. ನೀಡಿದೆ. ರಸ್ತೆ ವಿಸ್ತರಣೆ ಸಂದರ್ಭ ಪ್ರಸಾದ ಗಣಪತಿ ದೇವಸ್ಥಾನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಮನಸ್ಸು ಅಧ್ಯಾತ್ಮದಲ್ಲಿ ನೆಲೆ ನಿಲ್ಲುತ್ತದೆ. ಭಾರತದಲ್ಲಿ ನಾವು ಜನ್ಮ ತೆಳೆದಿದ್ದೇ ಪುಣ್ಯದ ಸಂಗತಿ. ದೇವರು, ಧರ್ಮ ಎಲ್ಲವೂ ಮನುಷ್ಯನ ಸನ್ಮಾರ್ಗಕ್ಕೆ ಪ್ರೇರಣೆ. ನಮ್ಮೊಳಗಿನ ಮಾನವೀಯತೆ ರಕ್ಷಿಸಿಕೊಳ್ಳುವ ಜತೆಗೆ ಪರೋಪಕಾರ ಭಾವ ಬೆಳೆಸಿಕೊಂಡಾಗ ಮನುಷ್ಯಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಸೇವಾ ಸಮಿತಿಯ ಆನಂದ ಗೌಡ, ಬಸವರಾಜ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ವಿ.ಮಹೇಶ್, ಬಿ.ಎಚ್.ಲಿಂಗರಾಜ್, ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಪರಿಮಳಾ, ಬಸವರಾಜ್, ಪ್ರಶಾಂತ್ ರಾಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net