ದೇಶ ವಿರೋಧಿ ಖಲಿಸ್ತಾನಿಗಳೊಂದಿಗೆ ರಾಹುಲ್​ ಗಾಂಧಿ ಸಮನ್ವಯತೆ; ವಿಪಕ್ಷ ನಾಯಕ ಭಾರತಿಯರಂತೆ ವರ್ತಿಸಲಿ ಎಂದ ಕೇಂದ್ರ ಸಚಿವ ರಿಜಿಜು | Kiren Rijiju

Kiren Rijiju
Published on

Kiren Rijiju: ಭಾರತ ಸರ್ಕಾರವನ್ನು ಅಸ್ಥಿರಗೊಳಿಸಲು ಒಂದು ಟ್ರಿಲಿಯನ್ ಡಾಲರ್‌ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿಕೊಂಡಿರುವ ಖಲಿಸ್ತಾನ್ ಸಹಿತ ಇತರ ದೇಶವಿರೋಧಿ ಪಡೆಗಳೊಂದಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಈ ಮೂಲಕ ದೇಶವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ವಾಗ್ದಾಳಿ ನಡೆಸಿದರು.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ರಾಹುಲ್ ಗಾಂಧಿ ಲೋಕಸಭೆಯ ವಿಪಕ್ಷ ನಾಯಕನ ಸ್ಥಾನದಲ್ಲಿದ್ದುಕೊಂಡ ದೇಶದ ಪ್ರಧಾನಿಯನ್ನು ಕಳ್ಳ ಎಂದು ಕರೆಯುವುದು, ರಫೇಲ್ ಯುದ್ಧ ವಿಮಾನದ ಬಗ್ಗೆ ಅಸಂಬದ್ಧವಾಗಿ ಮಾತನಾಡುವುದು ಮತ್ತು ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದಿರುವ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಛೀಮಾರಿ ಹಾಕಿದ್ದು, ರಾಹುಲ್ ಇನ್ನು ಮುಂದಾದರು ಭಾರತೀಯರಂತೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ರಾಹುಲ್ ಗಾಂಧಿ ಪ್ರತಿ ಬಾರಿ ಈ ರೀತಿ ಮಾತನಾಡಿದಾಗಲೆಲ್ಲಾ ಅವರ ಪಕ್ಷದ ಇತರ ಸಂಸದರು ತುಂಬಾ ಮುಜುಗರಕ್ಕೊಳಗಾಗುತ್ತಾರೆ. ಇವರು ಏನಾದರೂ ಅಸಂಬದ್ಧವಾಗಿ ಮಾತನಾಡಿದಾಗ, ಅದರಿಂದ ಪಕ್ಷಕ್ಕೆ ಆಗುವ ಹಾನಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ ಎಂದು ಸಚಿವ ರಿಜಿಜು ತಿಳಿಸಿದರು. ಪ್ರತಿಯೊಂದು ಪ್ರಜಾಪ್ರಭುತ್ವ ರಾಷ್ಟ್ರಕ್ಕೂ ಬಲಿಷ್ಠ ವಿರೋಧ ಪಕ್ಷ ಬೇಕು, ಆದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್​​ ವಿರೋಧ ಪಕ್ಷದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿಯೇ ವಿಫಲವಾಗಿದೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net