S Jaishankar: ಭಾರತದಿಂದ ತೈಲ ಖರೀದಿಗೆ ಇಷ್ಟವಿಲ್ಲದಿದ್ದರೆ ಬಿಟ್ಟು ಬಿಡಿ ,ಒತ್ತಾಯವಿಲ್ಲ | ವಿದೇಶಾಂಗ ಸಚಿವ ಎಸ್.ಜೈಶಂಕರ್

jaishankar
Published on

S Jaishankar: ರಷ್ಯಾ ಜೊತೆಗಿನ ಭಾರತದ ಇಂಧನ ಆಮದು ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಭಾರತದಿಂದ ಸಂಸ್ಕರಿಲ್ಪಟ್ಟ ತೈಲ ಸಂಬಂಧಿತ ಉತ್ಪನ್ನಗಳನ್ನು ಖರೀದಿಸಲು ಮನಸಿಲ್ಲದಿದ್ದರೆ ಬಿಟ್ಟು ಬಿಡಿ, ಈ ವಿಷಯವಾಗಿ ಯಾರಿಗೂ ಒತ್ತಾಯ ಮಾಡುವುದಿಲ್ಲ ಎಂದಿದ್ದಾರೆ.

ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ವ್ಯಾಪಾರ ಪರ ಎಂದು ಹೇಳಿಕೊಳ್ಳುವ ಅಮೆರಿಕ, ಬೇರೆಯವರು ವ್ಯಾಪಾರ ಮಾಡಿದರೆ ಆರೋಪಿಸುವುದು ಹಾಸ್ಯಾಸ್ಪದ, ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುವಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ ಖರೀದಿಸಬೇಡಿ ಎಂದರು. ಇತ್ತೀಚೆಗೆ ಭಾರತ ರಷ್ಯಾದಿಂದ ಹೆಚ್ಚು ತೈಲ ಖರೀದಿ ಮಾಡುವುದನ್ನು ಒಪ್ಪಿಕೊಂಡ ವಿದೇಂಶಾಂಗ ಸಚಿವರು ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ತೈಲವನ್ನು ಖರೀದಿಸುತ್ತಿದ್ದೇವೆ, ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂದರು.

ನಾವು (ಭಾರತ) ತೈಲ ಖರೀದಿಯ ಮೂಲಕ ಉಕ್ರೇನ್​​ದೊಂದಿಗಿನ ರಷ್ಯಾ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದೇವೆ ಎಂದು ಕೆಲವರು ಆರೋಪಿಸುತ್ತಾರೆ, ಆದರೆ ಭಾರತಕ್ಕಿಂತ ಹೆಚ್ಚು ವ್ಯಾಪಾರವನ್ನು ಯುರೋಪ್​​ ರಾಷ್ಟ್ರಗಳು ಮಾಡುತ್ತಿದ್ದು, ಹಾಗಾದರೆ ಆ ದೇಶಗಳು ಪುಟಿನ್ ಅವರ ಖಜಾನೆಗೆ ಹಣವನ್ನು ಹಾಕುತ್ತಿಲ್ಲವೇ ಎಂದು ಪ್ರಶ್ನಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net