ಕ್ರೀಡಾಕೂಟಗಳಿಗೆ ಸೂಕ್ತ ತಾಣ ಉಡುಪಿ...

Athletic
Published on

ಗೃಹ ಸಚಿವ ಡಾ. ಜಿ.ಪರಮೇಶ್ವರ ಮೆಚ್ಚುಗೆ

ರಾಜ್ಯಮಟ್ಟದ ಅಥ್ಲೆಟಿಕ್​ ಚಾಂಪಿಯನ್​ಶಿಪ್​ಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕ್ರೀಡಾಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸಿದರೆ ಕ್ರೀಡಾಪಟುಗಳಿಗೆ ಎಷ್ಟೊಂದು ಪ್ರಯೋಜನ ಆಗುತ್ತದೆ ಎನ್ನುವುದಕ್ಕೆ ಉಡುಪಿಯಲ್ಲಿ ಇಂದಿನಿಂದ ಆರಂಭಗೊಂಡ ರಾಜ್ಯಮಟ್ಟದ ಈ ಕ್ರೀಡಾಕೂಟವೇ ಸಾಕ್ಷಿ. ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಿ ಅವರು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲು ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಯಾವುದೇ ಬಗೆಯ ಕ್ರೀಡಾಕೂಟ ಆಯೋಜಿಸಲು ಎಲ್ಲ ಸೌಕರ್ಯ ಹೊಂದಿರುವ ಉಡುಪಿ ಸೂಕ್ತವಾದ ತಾಣವಾಗಿದೆ ಎಂದು ಗೃಹ ಸಚಿವ ಹಾಗೂ ರಾಜ್ಯ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ ವತಿಯಿಂದ ಆ.23ರಿಂದ ಆ.25ರ ವರೆಗೆ ನಡೆಯಲಿರುವ ರಾಜ್ಯದ 23 ವರ್ಷದೊಳಗಿನ ಕಿರಿಯರ ಅಥ್ಲೆಟಿಕ್​ ಚಾಂಪಿಯನ್​ಶಿಪ್​-2025ಕ್ಕೆ ಆಗಸ್ಟ್​ 23ರಂದು ಚಾಲನೆ ನೀಡಿ ಮಾತನಾಡಿದರು.

ಸಾಧನೆಗೆ ಸಹಕಾರಿ

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ ಮಾತನಾಡಿ, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಕ್ರೀಡಾ ಸಾಧನೆಯಲ್ಲಿ ತುಂಬ ಹಿಂದುಳಿದಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟವನ್ನು ಉಡುಪಿಯಲ್ಲಿ ಆಯೋಜಿಸಲು ಅವಕಾಶ ಕಲ್ಪಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಪಂ ಸಿಇಒ ಪ್ರತೀಕ ಬಾಯಲ್, ಪಶ್ಚಿಮ ವಲಯ ಐಜಿಪಿ ಅಮಿತ್​ ಸಿಂಗ್​, ಎಸ್ಪಿ ಹರಿರಾಂ ಶಂಕರ್​, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಪ್ರಸಾದರಾಜ ಕಾಂಚನ್​, ರಮೇಶ ಕಾಂಚನ್​, ಸುಧಾಕರ ಶೆಟ್ಟಿ, ಉದಯಕುಮಾರ್​ ಶೆಟ್ಟಿ ಮುನಿಯಾಲು, ಅಶೋಕಕುಮಾರ್​ ಕೊಡವೂರು, ರಾಜವೇಲು, ಸತ್ಯನಾರಾಯಣ, ಗೋಪಾಲ ಪೂಜಾರಿ, ಮಹೇಶ ಠಾಕೂರ್​, ಕೆನರಾ ಬ್ಯಾಂಕ್​ನ ಡಿಸಿಎಂ ಪಬಿತ್ರಕುಮಾರ್​ ದಾಸ್​, ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಕೆ. ಆಶಾ, ದಿನಕರ ಹೆರೂರು ಇತರರು ಉಪಸ್ಥಿತರಿದ್ದರು.

ಹೊನ್ನಾವರದ ಜೇಮ್ಸ್​ ಬ್ಯಾಂಡ್​ ತಂಡದವರು ರಾಷ್ಟ್ರಗೀತೆ ನುಡಿಸಿದರು. ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ ರೈ ಸ್ವಾಗತಿಸಿದರು. ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಕಾರ್ಯದರ್ಶಿ ದಿನೇಶಕುಮಾರ್​ ಎ. ವಂದಿಸಿದರು. ಕ್ರೀಡಾ ಮತ್ತು ಯವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನಕುಮಾರ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮಕ್ಕೂ ಮೊದಲು ಸಚಿವ ಪರಮೇಶ್ವರ ಅವರು ಕ್ರೀಡಾಜ್ಯೋತಿ ಸ್ವೀಕರಿಸಿ, ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಸಕ ಯಶ್​ಪಾಲ್​ ಸುವರ್ಣ ಕ್ರೀಡಾ ಧ್ವಜಾರೋಹಣ ಗೈದರು. ಬಳಿಕ ಬಲೂನ್​ ಹಾರಿಬಿಡುವ ಮೂಲಕ ಸಚಿವ ಪರಮೇಶ್ವರ ಅವರು ಮೂರು ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕ್ರೀಡಾಂಗಣ ಮೂಲ ಸೌಕರ್ಯಕ್ಕೆ 8 ಕೋಟಿ ರೂ.

ಬಜೆಟ್​ನಲ್ಲಿಯೂ ಸಹ ಸಿಎಂ ಸಿದ್ದರಾಮಯ್ಯ ಕ್ರೀಡಾಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಮಂಗಳೂರು ಕ್ರೀಡಾಂಗಣಕ್ಕೆ 5 ಕೋಟಿ ರೂ. ಹಾಗೂ ಉಡುಪಿಗೆ 3 ಕೋಟಿ ರೂ. ಘೋಷಿಸಿದ್ದಾರೆ. ಅದನ್ನು ಶೀಘ್ರದಲ್ಲಿಯೇ ಉಡುಪಿಗೆ ಲಭಿಸುವಂತೆ ಪ್ರಯತ್ನಿಸುತ್ತೇನೆ. ಆ ಅನುದಾನದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಇನ್ನಷ್ಟು ಸೌಕರ್ಯ ಒದಗಿಸಬೇಕು. ಪ್ರಸ್ತುತ ಕ್ರೀಡಾಕೂಟದ ವೆಚ್ಚಕ್ಕಾಗಿ 30 ಲಕ್ಷ ರೂ. ಅನುದಾನದ ಬೇಡಿಕೆ ಇಟ್ಟಿದ್ದು ಅದನ್ನೂ ಸಹ ಸಿಎಂ ಮೂಲಕ ತ್ವರಿತವಾಗಿ ಕೊಡಿಸುತ್ತೇನೆ ಎಂದು ಸಚಿವ ಪರಮೇಶ್ವರ ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾದ ಬಳಿಕ ಉಡುಪಿಯು ರಾಜ್ಯದಲ್ಲಿಯೇ ಅತಿಹೆಚ್ಚು ಕ್ರೀಡಾಕೂಟ ಆಯೋಜಿಸಿದ ಖ್ಯಾತಿ ಗಳಿಸಿದೆ. ಕ್ರೀಡಾಕೂಟದ ಯಶಸ್ಸಿಗೆ ಪೂರಕವಾಗಿ ಬೇಕಾದ ಉತ್ತಮ ಕ್ರೀಡಾಂಗಣ ಉಡುಪಿಯಲ್ಲಿದೆ. ರಾಜ್ಯದಿಂದ 1,680 ಕ್ರೀಡಾಪಟುಗಳು ಬಂದಿದ್ದು, ಸಾಧನೆಯ ಮೂಲಕ ರಾಜ್ಯ, ದೇಶದ ಕೀರ್ತಿಯ ಬೆಳಗಲಿ.

| ಯಶ್​ ಪಾಲ್​ ಸುವರ್ಣ. ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net