ಇದರ ಮುಂದೆ ಸಿಂಹ ಘರ್ಜನೆಯು ಡಮ್ಮಿ! 4 km ವರೆಗೂ ಕೇಳಿಸುತ್ತೆ ಧ್ವನಿ, ಈ ಮಂಗನ ಬಗ್ಗೆ ತಿಳಿದ್ರೆ ದಂಗಾಗ್ತೀರಿ | Howler Monkeys

Howler Monkeys
Published on

Howler Monkeys: ಕೆಲವೊಮ್ಮೆ ಕಾಡು ಶಾಂತವಾಗಿದ್ದರೆ, ಇನ್ನು ಕೆಲವೊಮ್ಮೆ ಭಯಾನಕ ಶಬ್ದಗಳಿಂದಲೇ ಕೂಡಿರುತ್ತದೆ. ಕಾಡಿನಲ್ಲಿ ಪ್ರಯಾಣಿಸುವಾಗ ಯಾವುದೇ ಪ್ರಾಣಿಯ ಕೂಗು ಕೇಳಿದರೆ ಸಾಕು ನಡುಗಿ ಹೋಗುತ್ತೇವೆ. ಇಡೀ ಕಾಡನ್ನೇ ನಡುಗಿಸುವ ಶಬ್ದ ಯಾವ ಪ್ರಾಣಿಗಿದೆ ಎಂದು ಯಾರಾದರೂ ಕೇಳಿದರೆ ತಮ್ಮ ತಲೆಗೆ ಬರುವ ಮೊದಲ ಹೆಸರೇ ಸಿಂಹ ಮತ್ತು ಹುಲಿ. ಈ ಪ್ರಾಣಿಗಳ ಘರ್ಜನೆ ಅನೇಕ ಕಿಲೋಮೀಟರ್‌ವರೆಗೆ ಕೇಳಬಹುದು. ಆದರೆ, ಸಿಂಹ ಮತ್ತು ಹುಲಿ ಮಾತ್ರವಲ್ಲದೆ, ತನ್ನ ದೊಡ್ಡ ಧ್ವನಿಯಿಂದಲೇ ಇಡೀ ಕಾಡನ್ನೇ ನಡುಗಿಸುವ ಮಂಗ ಕೂಡ ಇದೆ ಎಂದರೆ ನೀವು ನಂಬುತ್ತೀರ. ನಂಬಲೇಬೇಕು. ಅದಕ್ಕೆ ಉದಾಹರಣೆಯೇ ಹೌಲರ್ ಕೋತಿಗಳು.

Howler Monkeys 1

ಈ ಹೌಲರ್ ಕೋತಿಗಳು ನಿಯೋಟ್ರೋಪಿಕ್ಸ್‌ನಲ್ಲಿ ಅತ್ಯಂತ ವ್ಯಾಪಕವಾಗಿರುವ ಪ್ರೈಮೇಟ್ ಕುಲವಾಗಿದೆ. ನಿಯೋಟ್ರೋಪಿಕ್ಸ್ ಎಂಬುದು ಒಂದು ಜೈವಿಕ ಭೌಗೋಳಿಕ ಪ್ರದೇಶವಾಗಿದ್ದು, ಇದು ಮಧ್ಯ ಅಮೆರಿಕ, ಕೆರಿಬಿಯನ್ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಈ ಹೌಲರ್​ ಕೋತಿಗಳು ಹೆಚ್ಚಾಗಿ ಕಂಡುಬರುತ್ತದೆ.

Howler Monkeys 2

ದಟ್ಟವಾದ ಮಳೆಕಾಡಿನಲ್ಲೂ ಹೌಲರ್​ ಕೋತಿಗಳು ಕೂಗಿದರೆ ಮೂರು ಮೈಲುಗಳಷ್ಟು ದೂರದವರೆಗೆ ಕೇಳುತ್ತದೆ. ಅಷ್ಟೊಂದು ಜೋರಾಗಿ ಕೂಗುತ್ತವೆ ಈ ಮಂಗಗಳು. ಹೌಲರ್ ಕೋತಿಗಳ ಹದಿನೈದು ಜಾತಿಗಳನ್ನು ಈವರೆಗೆ ಗುರುತಿಸಲಾಗಿದೆ. ಈ ಹಿಂದೆ Cebidae ಕುಟುಂಬದಲ್ಲಿ ವರ್ಗೀಕರಿಸಲಾಗಿತ್ತು ಆದರೆ, ಈಗ Atelidae ಕುಟುಂಬದಲ್ಲಿವೆ. ಈ ಮಂಗಗಳು ಜೀವ ಪರಿಸರ ವ್ಯವಸ್ಥೆಯಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳ ಜೀರ್ಣಾಂಗ ವ್ಯವಸ್ಥೆ ಮತ್ತು ಅವುಗಳ ಚಲನೆಗಳ ಮೂಲಕ ಬೀಜಗಳನ್ನು ಹರಡುತ್ತವೆ.

Howler Monkeys 3

ಈ ಮಂಗಗಳು ತಮ್ಮ ಧ್ವನಿಯ ಮೂಲಕವೇ ಸಂವಹನ ನಡೆಸುತ್ತವೆ. ಇವುಗಳು ಬೇಸಿಹ್ಯಾಲ್ ಅಥವಾ ಹೈಯ್ಡ್ ಮೂಳೆಯನ್ನು ಹೊಂದಿದ್ದು, ಜೋರಾಗಿ ಧ್ವನಿ ಮಾಡಲು ಸಹಾಯ ಮಾಡುತ್ತದೆ. ಗಂಡು ಕೋತಿಗಳು ಸಾಮಾನ್ಯವಾಗಿ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಗುಂಪುಗಳಲ್ಲಿ ಜೋರಾಗಿ ಶಬ್ದ ಮಾಡುತ್ತವೆ. ಹೌಲರ್ ಕೋತಿಗಳನ್ನು ಭೂಮಿಯಲ್ಲೇ ಅತಿ ಹೆಚ್ಚು ಶಬ್ದ ಮಾಡುವ ಪ್ರಾಣಿಗಳೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಈ ಮಂಗಗಳ ಧ್ವನಿ 3 ಮೈಲಿ (4.8 ಕಿಮೀ) ವರೆಗೆ ಸ್ಪಷ್ಟವಾಗಿ ಕೇಳಬಹುದು.

Howler Monkeys 4

ಇವು ದೊಡ್ಡ ಹಾಗೂ ನಿಧಾನವಾಗಿ ಚಲಿಸುವ ಕೋತಿಗಳು. ಇವುಗಳ ಮುಖ್ಯ ಆಹಾರವೆಂದರೆ ಹಣ್ಣುಗಳು, ಮೊಗ್ಗುಗಳು, ಹೂವುಗಳು, ಬೀಜಗಳು ಮತ್ತು ಎಲೆಗಳು. ಕೆಲವೊಮ್ಮೆ ಈ ಮಂಗಗಳು ಪಕ್ಷಿ ಗೂಡುಗಳಿಂದ ಮೊಟ್ಟೆಗಳನ್ನು ತಿನ್ನುತ್ತವೆ. ಹಣ್ಣುಗಳು ಜೀರ್ಣವಾದಾಗ ಶೇ. 90 ರಷ್ಟು ಬೀಜಗಳು ಹಾನಿಯಾಗದಂತೆ ಹೊರಹಾಕಲ್ಪಡುತ್ತವೆ. ಇದು ಉಷ್ಣವಲಯದ ಕಾಡುಗಳಲ್ಲಿ ಬೀಜ ಪ್ರಸರಣಕ್ಕೆ ಸಹಾಯ ಮಾಡುತ್ತದೆ. ಈ ಮೂಲಕ ಜೀವ ಪರಿಸರ ವ್ಯವಸ್ಥೆಯಲ್ಲೂ ತನ್ನದೇಯಾದ ಸೇವೆಯನ್ನು ಈ ಮಂಗ ಸಲ್ಲಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net