ಸಮ ಪಾಲು-ಸಮ ಬಾಳು ತತ್ವದ ಆಯವ್ಯಯ

cm
Published on

ಬೆಂಗಳೂರು: ಸಮ ಪಾಲು-ಸಮ ಬಾಳು ತತ್ವ ಅನುಸರಿಸುವ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮತ್ತು ಧ್ವನಿ ಇಲ್ಲದ ಸಮುದಾಯಗಳತ್ತಲೂ ಇದೇ ಮೊದಲ ಬಾರಿಗೆ ಚಿತ್ತ ಹರಿಸಿದ್ದಾರೆ. ಆ ಮೂಲಕ ದೀನ ದಲಿತರ, ನೊಂದವರ, ಅಶಕ್ತರ ಪಾಲಿಗೂ ಬಜೆಟ್ ಆಶಾಕಿರಣವಾಗಿಸುವಲ್ಲಿ ಬದ್ಧತೆ ತೋರಿಸಿದ್ದಾರೆ.

ಮೊದಲ ಬಾರಿ 2013ರಲ್ಲಿ ಮುಖ್ಯಮಂತ್ರಿಯಾಗಿ ಬಸವಜಯಂತಿಯ ದಿನವೇ ಅಧಿಕಾರ ವಹಿಸಿಕೊಂಡಿದ್ದ ಸಿದ್ದರಾಮಯ್ಯ, ಮೊದಲ ಕ್ಯಾಬಿನೆಟ್​ನಲ್ಲಿಯೇ ಅನ್ನ ಭಾಗ್ಯ ಯೋಜನೆ ಘೋಷಣೆ ಮಾಡಿ ಯಶಸ್ವಿಯಾಗಿ ಜಾರಿಗೆ ತಂದಿದ್ದರು. ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಹಲವು ಭಾಗ್ಯದ ಯೋಜನೆಗಳನ್ನು ಕರುಣಿಸಿದ್ದ ಸಿದ್ದರಾಮಯ್ಯ, ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿಯೂ ಅದೇ ಬದ್ಧತೆ ಮುಂದುವರಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಮೂಲಕ 4 ಕೋಟಿಗೂ ಹೆಚ್ಚು ಜನರಿಗೆ ತಲುಪಿರುವ ಸರ್ಕಾರ, ಇನ್ನೂ ಅಲಕ್ಷಿತ ಜನರನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ನೀಡಲು ಮುಂದಾಗಿರುವುದು ಬಜೆಟ್​ನಲ್ಲಿ ಹೊಂಬೆಳಕಾಗಿ ಗೋಚರಿಸುತ್ತಿದೆ.

ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಎನ್ನ ಶಿರವೇ ಹೊನ್ನ ಕಲಶವಯ್ಯ ಎನ್ನುವ ವಚನ ವಾಣಿಯಂತೆ ಉಳ್ಳವರನ್ನು ಹೊರತಾಗಿರುವ ಮತ್ತೊಂದು ಸಮಾಜದ ಮಗ್ಗುಲು ಪರಿಚಯಿಸುವ ಮೂಲಕ ಸಣ್ಣ-ಪುಟ್ಟ ಸಮಾಜಗಳಿಗೂ ಬಜೆಟ್​ನಲ್ಲಿ ಒಂದಲ್ಲಾ ಒಂದು ಯೋಜನೆ ಲಭ್ಯವಾಗುವಂತೆ ಮಾಡಿರುವುದೂ ಮುಖ್ಯಮಂತ್ರಿಗಳಿಗಿರುವ ಸಾಮಾಜಿಕ ಕಳಕಳಿಯ ಧ್ಯೋತಕ.

ದೇಶದ ಪ್ರಸಿದ್ಧ ಸಾಮಾಜಿಕ ಹರಿಕಾರರು ಮತ್ತು ರಾಜಕೀಯ ಚಿಂತಕರಾದ ನಾರಾಯಣಗುರು, ಜ್ಯೋತಿಬಾ ಫುಲೆ, ಪೆರಿಯಾರ್ ರಾಮಸ್ವಾಮಿ, ರಾಮಮನೋಹರ ಲೋಹಿಯಾ ಹಾಗೂ ಬಾಬು ಜಗಜೀವನರಾಮ್ ಅವರ ಬರಹಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಇದೇ ಮೊಟ್ಟ ಮೊದಲ ಬಾರಿಗೆ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಆದರ್ಶ ಸಮಾಜದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಬಜೆಟ್​ನಲ್ಲಿ ಸ್ಪಷ್ಟವಾಗಿದೆ. ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರದ ಮೂಲಕ ತತ್ವಪದ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಸೇರಿ ಸಾಹಿತ್ಯ ಸಮೀಕ್ಷೆ ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳಿಗೂ ಒತ್ತು ನೀಡಲಾಗಿದೆ.

ತತ್ವಪದಕಾರರು ಹಾಗೂ ಸೂಫಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನಕ್ಕಾಗಿ ಕಲಬುರಗಿ ವಿವಿಯಲ್ಲಿ ಅಧ್ಯಯನ ಪೀಠ, ಶಿವಯೋಗಿ ಸಿದ್ದರಾಮೇಶ್ವರರ ಬದುಕು ಬರಹ ಕುರಿತ ಅಕ್ಕಮಹಾದೇವಿ ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಕ್ರಮ ಕೈಗೊಂಡಿರುವುದು ಬಸವತತ್ವದ ಆಡಳಿತಕ್ಕೆ ಮುನ್ನಡಿ ಬರೆದಂತಿದೆ.

ತ್ರಿಪದಿಗಳ ಮೂಲಕ ಜೀವನಸಾರವನ್ನು ಜನಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಉಣಬಡಿಸಿದ ಸರ್ವಜ್ಞನ ಸ್ಮಾರಕವನ್ನು ಹಿರೆಕೇರೂರಿನಲ್ಲಿ ಅಭಿವೃದ್ಧಿಪಡಿಸಲು ಹೆಜ್ಜೆ ಇಡಲಾಗಿದೆ. ನಾಡನ್ನು ಸಾಂಸ್ಕೃತಿಕವಾಗಿಯೂ ಕಟ್ಟಬೇಕು ಎನ್ನುವ ಅರಿವು ಇಟ್ಟುಕೊಂಡಿರುವ ಸಿಎಂ, ಸಾಹಿತ್ಯ, ನಾಟಕ, ಜಾನಪದ ಕಲೆ, ನೃತ್ಯ, ಸಂಗೀತ, ಸೇರಿ ಸಂಸ್ಕೃತಿ ವಿವಿಧ ಪ್ರಕಾರಗಳಿಗೂ ಆದ್ಯತೆ ನೀಡುವ ರೀತಿಯಲ್ಲಿ ಕಾರ್ಯಕ್ರಮ ಕೊಡಲು ಮುಂದಾಗಿರುವುದು ಬಜೆಟ್ ವಿಶೇಷ.

ಬಜೆಟ್ ಅಂದರೆ ಯೋಜನೆಗಳಿಗೆ ಹಣ ಕೊಡುವುದು ಎಂದು ತಿಳಿದಿದ್ದೆವು. ನಿರ್ಲಕ್ಷಿತ ಸಮುದಾಯಗಳನ್ನು ಗಮನದಲ್ಲಿರಿಸಿಕೊಂಡು ಬಜೆಟ್ ರೂಪಿಸಿರುವುದು ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆಗೆ ಇರುವ ಸಾಕ್ಷಿ. ಸಾಮಾಜಿಕ ಕ್ರಾಂತಿಕಾರಿಗಳ ಚಿಂತನೆಗಳ ಬೆಳಕಿನಲ್ಲಿ ಅರಳಿರುವ ಬಜೆಟ್ ಎಲ್ಲರಿಗೂ ಬೆಳಕಾಗಿದೆ.

| ತಿಮ್ಮಯ್ಯ, ನಿವೃತ್ತ ಶಿಕ್ಷಕರು, ತಾಳಿಕಟ್ಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net