ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಅಳವಡಿಕೆ: ಇಒ ಚಂದ್ರಕಾಂತ್ ಮಾಹಿತಿ ಶಿಡ್ಲಘಟ್ಟ ತಾಪಂನಲ್ಲಿ ಪ್ರಾತ್ಯಕ್ಷಿಕೆ

27.07.2021 SDLP 02
Published on

ಶಿಡ್ಲಘಟ್ಟ :  ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಸ್ಥಾಪಿಸಲಾಗುತ್ತಿದ್ದು, ಯಂತ್ರ ಖರೀದಿಗೆ ಎಲ್ಲ ಗ್ರಾಪಂಗಳಿಗೂ ಅನುದಾನ ಬಿಡುಗಡೆ ಆಗಿದೆ ಎಂದು ತಾಲೂಕು ಪಂಚಾಯಿತಿ ಇಒ ಚಂದ್ರಕಾಂತ್ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಮಂಗಳವಾರ ಯಂತ್ರದ ಪ್ರಾತ್ಯಕ್ಷಿಕೆ ವೇಳೆ ಮಾತನಾಡಿ, ಸ್ಯಾನಿಟರಿ ಪ್ಯಾಡ್‌ಗಳನ್ನು ಕಸದೊಂದಿಗೆ ಎಸೆಯುವುದರಿಂದ ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೂ ಹಾನಿಯಾಗಲಿದೆ. ಸಾರ್ವಜನಿಕ ಕಟ್ಟಡಗಳ ಶೌಚಗೃಹದಲ್ಲಿ ಬಿಸಾಡುವುದರಿಂದ ತ್ಯಾಜ್ಯ ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಇನ್ಸಿನರೇಟರ್ ಯಂತ್ರವನ್ನು ಹಲವೆಡೆ ಸ್ಥಾಪಿಸಲಾಗುತ್ತಿದೆ ಎಂದರು.

ಯಂತ್ರದೊಳಗೆ ಪ್ಯಾಡ್‌ಗಳನ್ನು ಹಾಕಿದರೆ ಅವು ಸುಟ್ಟು ಭಸ್ಮವಾಗಲಿದ್ದು ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ, ಕೆಟ್ಟ ವಾಸನೆಯೂ ಬರುವುದಿಲ್ಲ. ಮಹಿಳೆಯರು ಉದ್ಯೋಗ ಮಾಡುವ ಸ್ಥಳಗಳಲ್ಲಿ, ಶಾಲಾ-ಕಾಲೇಜುಗಳ ಬಳಿ ಯಂತ್ರವನ್ನು ಸ್ಥಾಪಿಸಿ, ಅರಿವು ಮೂಡಿಸುವ ಜತೆಗೆ ಬಳಸಲು ಪ್ರೇರೇಪಿಸಲಾಗುವುದು ಎಂದು ವಿವರಿಸಿದರು.

ಯಂತ್ರ ವಿದ್ಯುತ್‌ನಿಂದ ಕೆಲಸ ನಿರ್ವಹಿಸುತ್ತದೆ.

ಪ್ಯಾಡ್‌ನ್ನು ಯಂತ್ರಕ್ಕೆ ಹಾಕುವ 30 ನಿಮಿಷ ಮುನ್ನ ಅದರ ಸ್ವಿಚ್ ಆನ್ ಮಾಡಬೇಕು. ನಂತರ ಪ್ಯಾಡ್‌ಗಳನ್ನು ಅದರೊಳಗೆ ಹಾಕಿ ಬಾಗಿಲು ಮುಚ್ಚಿ ಕೆಂಪು ಬಟನ್ ಒತ್ತಿದರೆ 15 ನಿಮಿಷದಲ್ಲಿ ಅದು ಸುಡಲಿದೆ, ಪ್ರತ್ಯೇಕ ಕೊಳವೆ ಮೂಲಕ ಹೊಗೆ ಹೊರಗೆ ಹೋಗಲಿದ್ದು ಬೂದಿ ಉಳಿಯುತ್ತದೆ. ಆ ಬೂದಿಯನ್ನು ಶೌಚಗೃಹ ಅಥವಾ ಕಸದಲ್ಲಿ ಹಾಕಬೇಕು ಎಂದು ಎಚ್‌ಎಲ್‌ಎಲ್ ಕಂಪೆನಿಯ ಸಂಪತ್ ಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net