

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ಮೂಲದ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕಾರ್ಪೊರೇಟ್ ಕಚೇರಿಯಿಂದ ಜಾರಿ ನಿರ್ದೇಶನಾಲಯ (Enforcement Directorate) ಶುಕ್ರವಾರ(ನವೆಂಬರ್ 15) 8.8 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ.ಲಾಟರಿ ಕಿಂಗ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಇದಕ್ಕೂ ಮುನ್ನ ತಮಿಳುನಾಡು ಪೊಲೀಸರು ಮಾರ್ಟಿನ್ ಮತ್ತು ಅವರ ಸಹಚರರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದರು. ಕೆಳ ನ್ಯಾಯಾಲಯವು ಪೊಲೀಸರ ಈ ಮನವಿಯನ್ನು ಅಂಗೀಕರಿಸಿತ್ತು. ಆದರೆ ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಲಾಟರಿ ಕಿಂಗ್ ಮಾರ್ಟಿನ್ ವಿರುದ್ಧ ವಿಸ್ತೃತ ತನಿಖೆ ನಡೆಸಲು ಇಡಿಗೆ ಅನುಮತಿ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮಾರ್ಟಿನ್ ಅವರ ಅಳಿಯ ಆಧವ್ ಅರ್ಜುನ್ ಮತ್ತು ಅವರ ಸಹಚರರಿಗೆ ಸೇರಿದ ತಮಿಳುನಾಡಿನ ಚೆನ್ನೈ ಮತ್ತು ಕೊಯಮತ್ತೂರು, ಹರಿಯಾಣದ ಫರಿದಾಬಾದ್, ಪಂಜಾಬ್ನ ಲುಧಿಯಾನ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿನ ಕನಿಷ್ಠ 20 ಸ್ಥಳಗಳಲ್ಲಿ ಶೋಧ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಪ್ರಕರಣವು ಲಾಟರಿ ವಂಚನೆ ಮತ್ತು ಅಕ್ರಮ ಲಾಟರಿ ಮಾರಾಟಕ್ಕಾಗಿ ಮಾರ್ಟಿನ್ ಮತ್ತು ಅವರ ನೆಟ್ವರ್ಕ್ ವಿರುದ್ಧದ ಎಫ್ಐಆರ್ಗಳನ್ನು ಆಧರಿಸಿದೆ. ಚೆನ್ನೈನಲ್ಲಿರುವ ಅವರ ಮನೆಯಿಂದ ಲೆಕ್ಕಕ್ಕೆ ಸಿಗದ 7.2 ಕೋಟಿ ರೂಪಾಯಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. (ಏಜೆನ್ಸೀಸ್)