

ಸಾಗರ: ವೀರಶೈವ ಸಮುದಾಯ ಸದಾ ಎಲ್ಲ ಸಮುದಾಯಗಳ ಏಳಿಗೆ ಬಯಸುತ್ತ ಬಂದಿದೆ. ಧಾರ್ಮಿಕ ಆಚರಣೆ ಮತ್ತು ಆರಾಧನೆಗಳ ಮಹತ್ವವನ್ನು ಯುವಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಸಾಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವೀರಶೈವ ಸಮಾಜದಿಂದ ಆಯೋಜಿಸಿದ್ದ ವೀರಭದ್ರೇಶ್ವರ ಸ್ವಾಮಿ ಗುಗ್ಗಳ, ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾನೋ ಆತನ ಮನಸ್ಸು ಸದಾ ಕ್ರಿಯಾಶೀಲ, ಶಾಂತಿಯಿಂದ ಕೂಡಿರುತ್ತದೆ. ವೀರಶೈವ ಸಮುದಾಯ ತನ್ನ ಧಾರ್ಮಿಕ ಆಚರಣೆಗಳ ಮೂಲಕ ಸಮೂಹದ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸುತ್ತ ಬಂದಿದೆ. ಅದರಲ್ಲಿಯೂ ವೀರಭದ್ರೇಶ್ವರ ಗುಗ್ಗಳ ಸಮುದಾಯಕ್ಕೆ ಧಾರ್ಮಿಕ ಸಂದೇಶ ಸಾರುವ ಜತೆಗೆ ನಮ್ಮ ಜಾನಪದ ಕಲೆಯನ್ನು ಪ್ರಸರಿಸುವ ಕೆಲಸ ಮಾಡುತ್ತಿದೆ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ ಮಾತನಾಡಿ, ಅನೇಕ ವರ್ಷಗಳಿಂದ ನಮ್ಮ ಸಮಾಜ ವೀರಭದ್ರೇಶ್ವರ ಗುಗ್ಗಳ ನಡೆಸಿಕೊಂಡು ಬರುತ್ತಿದೆ. ಇಕ್ಕೇರಿ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುಗ್ಗಳ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯುತ್ತದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸಮಾಜದ ಉಪಾಧ್ಯಕ್ಷ ಕೆ.ಎಚ್.ಜ್ಞಾನೇಶ್ವರಪ್ಪ, ಪ್ರಮುಖರಾದ ಬೇಸೂರು ಗಿರೀಶ್, ನಿರಂಜನ್, ಬಿ.ಎಚ್.ಲಿಂಗರಾಜ್, ಕೆಂಬಾವಿ ನಾಗರಾಜ್, ಯು.ಸಿ.ಬಸವೇಶ್, ಬಾಣಾವರ ಚನ್ನಬಸಪ್ಪ, ಶರಣೇಶ್ ದುಗ್ಗಾವಿ, ಕಾವ್ಯಾ ಗುರುಪ್ರಸಾದ್, ಶಿವಕುಮಾರ್ ಇತರರಿದ್ದರು.