

ಪಡಿತರ ಚೀಟಿಯ ತಿದ್ದುಪಡಿಗೆ ಜನವರಿ 31 ಕೊನೆಯ ದಿನವೆಂಬ ವದಂತಿಯಿಂದ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಕಿ.ಮೀಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಪರದಾಡಿರುವ ಘಟನೆಗಳು ರಾಜ್ಯದ ಹಲವೆಡೆಯಿಂದ ವರದಿಯಾಗಿವೆ. ಸೋಮವಾರ ಉತ್ತರ ಕನ್ನಡದ ಅಂಕೋಲಾ ಸೇರಿದಂತೆ ಹಲವು ಪ್ರದೇಶಗಳಿಂದ ಈ ಮಾದರಿಯ ಘಟನೆಗಳು ವರದಿಯಾದರೆ, ಮಂಗಳವಾರ ಬೆಂಗಳೂರಿನ ರಾಜಾಜಿನಗರದ ‘ಬೆಂಗಳೂರು ಒನ್’ ಕೇಂದ್ರದ ಮುಂದೆ ಜನರು ಉದ್ದದ ಸಾಲಿನಲ್ಲಿ ತಾಸುಗಟ್ಟಲೇ ನಿಂತು ಪರದಾಡಿದ್ದಾರೆ. ಕಾರ್ಡ್ ತಿದ್ದುಪಡಿಗೆ 2024ರ ಡಿಸೆಂಬರ್ವರೆಗೆ ಆಹಾರ ಇಲಾಖೆ ಅವಕಾಶ ನೀಡಿತ್ತು. ಕಾರ್ಡ್ದಾರರ ಬೇಡಿಕೆ ಮೇರೆಗೆ ತಿದ್ದುಪಡಿ ಪ್ರಕ್ರಿಯೆಯನ್ನು ಜನವರಿ 31ರವರೆಗೆ ವಿಸ್ತರಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಬಳಿಕ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿರುವ ಆಹಾರ ಇಲಾಖೆ, ‘ಕಾರ್ಡ್ದಾರರು ಆತಂಕಪಡಬೇಕಿಲ್ಲ. ಇದು ನಿರಂತರ ಪ್ರಕ್ರಿಯೆ. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲೂ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿದೆ’ ಎಂದಿದೆ. ಅಲ್ಲದೆ, ಹೊಸದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ನೀಡುವುದನ್ನು ಸದ್ಯ ಆಹಾರ ಇಲಾಖೆ ನಿಲ್ಲಿಸಿರುವುದು ಜನರ ಸಮಸ್ಯೆಯನ್ನು ಹೆಚ್ಚಿಸಿದೆ. ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾರ್ಡ್ಗಾಗಿ ಹಿಂದೆ ಸಲ್ಲಿಸಿದ್ದ ಲಕ್ಷಾಂತರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳು ಸೌಕರ್ಯದಿಂದ ವಂಚಿತರಾಗಿದ್ದಾರೆ.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಇ-ಶ್ರಮ್ ನೋಂದಾಯಿತ ಕಾರ್ವಿುಕರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಮಾತ್ರ ಸರ್ಕಾರದ ಅನುಮತಿ ಮೇರೆಗೆ ಹೊಸ ಬಿಪಿಎಲ್ ಕಾರ್ಡ್ ಮಂಜೂರು ಮಾಡಲಾಗುತ್ತಿದೆ. ಆದರೆ, ಪಡಿತರ ಚೀಟಿ ಬಗ್ಗೆ ಒಂದಿಲ್ಲ ಒಂದು ಗೊಂದಲ, ಅಸ್ಪಷ್ಟತೆಯಿಂದ ಜನರು ನಿರಂತರ ಸಮಸ್ಯೆ ಅನುಭವಿಸುತ್ತಿರುವುದಂತೂ ಹೌದು. ಪದೇಪದೆ ನಿಯಮಗಳನ್ನು ಬದಲಿಸುವುದು, ಈ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿಯನ್ನೂ ನೀಡದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಆಹಾರಧಾನ್ಯ ವಿತರಣೆಗಾಗಿ ಬಯೋಮೆಟ್ರಿಕ್ ತಪಾಸಣೆ, ದೃಢೀಕರಣದ ವೇಳೆಯೂ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಇಡೀ ದಿನ ಸರದಿ ಸಾಲಿನಲ್ಲಿ ಕಾಯುವಂತಾಗಿತ್ತು.
ಆಹಾರ ಇಲಾಖೆ ಈ ಬಗೆಯ ಸಮಸ್ಯೆಗಳಿಗೆ ರ್ತಾಕ ಅಂತ್ಯ ಒದಗಿಸಬೇಕು. ಕಾರ್ಡ್ ರದ್ದತಿ ಮತ್ತು ಹೊಸ ಕಾರ್ಡ್ಗಳ ನೀಡುವಿಕೆ ಹೊತ್ತಲ್ಲಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಆಗುತ್ತಿದೆ. ಈ ಪ್ರಕ್ರಿಯೆಯನ್ನು ವ್ಯವಸ್ಥಿತ ಹಾಗೂ ಪಾರದರ್ಶಕಗೊಳಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾರ್ಡ್ನ ತಿದ್ದುಪಡಿಗೆ ಹಲವಾರು ನಿಬಂಧನೆಗಳನ್ನು ಏಕೆ ವಿಧಿಸಬೇಕು? ಈ ಪ್ರಕ್ರಿಯೆಯನ್ನು ಸರಳಗೊಳಿಸಿದರೆ ಜನರಲ್ಲಿ ಆತಂಕ ಇರುವುದಿಲ್ಲ, ವದಂತಿಯೂ ಹಬ್ಬುವುದಿಲ್ಲ.
ಈ ನಿಟ್ಟಿನಲ್ಲಿ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಬೇಕು. ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸಂವೇದನೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕೇಂದ್ರ ತೆರೆಯಬೇಕು. ಸರ್ವರ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ಈ ಬಗೆಯ ಸಮಸ್ಯೆಗಳು ಉದ್ಭವಿಸಿದರೆ ಜನರು ಸೌಲಭ್ಯಗಳಿಂದ ವಂಚಿತರಾಗುವುದು ಮಾತ್ರವಲ್ಲದೆ, ವ್ಯವಸ್ಥೆಯ ಮೇಲಿನ ನಂಬಿಕೆಯನ್ನೂ ಕ್ರಮೇಣ ಕಳೆದುಕೊಳ್ಳುತ್ತಾರೆ. ಹಾಗಾಗುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಲಿ.