ಕರಾಳ ಯುಗ ಅಂತ್ಯ: ಸಿರಿಯಾ ಬಂಡುಕೋರರ ವಶವಾದ ರಾಜಧಾನಿ ಡಮಾಸ್ಕಸ್, ಅಧ್ಯಕ್ಷ ಅಸ್ಸಾದ್ ಪಲಾಯನ | Syria

Syria
Published on

Syria : ಜಾಗತಿಕವಾಗಿ ಹೆಚ್ಚಾಗುತ್ತಿರುವ ಸಂಘರ್ಷಗಳು ಮಾನವ ಕುಲವನ್ನು ಅಪಾಯಕ್ಕೆ ದೂಡುತ್ತಿದೆ. ಈಗಾಗಲೇ ರಷ್ಯಾ-ಯೂಕ್ರೇನ್ ಹಾಗೂ ಇಸ್ರೇಲ್​-ಪ್ಯಾಲೇಸ್ತೀನ್​ ಯುದ್ಧದಿಂದ ಜನರು ನಲುಗಿ ಹೋಗಿದ್ದಾರೆ. ಅಲ್ಲದೆ, ಅಫ್ಘಾನಿಸ್ತಾನದ ಮೇಲೆ ತಾಲಿಬಾನ್​ ಉಗ್ರರ ಅಟ್ಟಹಾಸದಿಂದ ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಇದೀಗ ಮತ್ತೊಂದು ದೇಶದಲ್ಲಿ ಸಂಘರ್ಷ ಉಲ್ಬಣಗೊಂಡಿದೆ.

ಸಿರಿಯಾದ ಬಂಡುಕೋರರ ಪಡೆಗಳು ಸರ್ಕಾರದ ವಿರುದ್ಧ ಸಮರ ಸಾರಿವೆ. ಕಳೆದ ಒಂದು ವಾರದಿಂದ ನಿರಂತರ ದಾಳಿಗಳು ನಡೆಯುತ್ತಿದ್ದು, ಅಂತಿಮವಾಗಿ ಬಂಡುಕೋರರು ಸಿರಿಯಾ ರಾಜಧಾನಿ ಡಮಾಸ್ಕಸ್​ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನವೇ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ. ಇನ್ನು ಬಂಡುಕೋರರ ದಾಳಿಗೆ ಸಿರಿಯಾ ಸೇನೆ ಯಾವುದೇ ಪ್ರತಿರೋಧ ತೋರದೇ ಇರುವುದು ಅಚ್ಚರಿಯಾಗಿದೆ.

ಕಳೆದ 24 ವರ್ಷಗಳ ಕಾಲ ದೇಶವನ್ನು ಆಳಿದ ಅಸ್ಸಾದ್, ಅಜ್ಞಾತ ಸ್ಥಳಕ್ಕೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಸಿರಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಅಸ್ಸಾದ್ ಅವರ ಆಡಳಿತ ಪತನವಾಗಿದೆ ಎಂದು ಸೇನಾ ಕಮಾಂಡ್, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನಿರಂಕುಶಾಧಿಕಾರಿ ಬಶರ್ ಅಲ್-ಅಸ್ಸಾದ್ ದೇಶದಿಂದಲೇ ಪಲಾಯನ ಮಾಡಿದ್ದಾನೆ. ನಾವು ರಾಜಧಾನಿ ಡಮಾಸ್ಕಸ್ ಅನ್ನು ನಿರಂಕುಶಾಧಿಕಾರಿ ಬಶರ್ ಅಲ್-ಅಸ್ಸಾದ್​ನಿಂದ ಮುಕ್ತಗೊಳಿಸಿದ್ದೇವೆ ಎಂದು ಬಂಡುಕೋರರು ಘೋಷಿಸಿದ್ದಾರೆಂದು ಅಲ್ ಜಜೀರಾ ವರದಿ ಮಾಡಿದೆ.

ನಾವು ಇಂದು 8-12--2024 ಈ ಕರಾಳ ಯುಗದ ಅಂತ್ಯ ಮತ್ತು ಸಿರಿಯಾದ ಹೊಸ ಯುಗದ ಆರಂಭವನ್ನು ಘೋಷಿಸುತ್ತೇವೆ ಎಂದು ಹಯಾತ್ ತಹ್ರೀರ್ ಅಲ್-ಶಾಮ್ ಬಂಡಾಯ ಬಣವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಯಾವುದೇ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ.

ಸದ್ಯ ರಾಜಧಾನಿ ಡಮಾಸ್ಕಸ್​ನಲ್ಲಿ ಭೀತಿ ಆವರಿಸಿದ್ದು, ನಗರದಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ವಿವರಿಸಿದ್ದಾರೆ. ಇನ್ನು ಅಸ್ಸಾದ್ ಸರ್ಕಾರದ ಪತನವಾದ ಬೆನ್ನಲ್ಲೇ ಅಸ್ಸಾದ್​ ನಿಷ್ಠಾವಂತರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ.

ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್ ಅಲ್-ಅಸ್ಸಾದ್ ಆಡಳಿತವು ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಬಂಡಾಯ ಗುಂಪುಗಳಿಂದ ಮೂಲೆಗುಂಪಾಗಿದೆ. ಈ ಗುಂಪುಗಳನ್ನು ಟರ್ಕಿ ಬೆಂಬಲಿಸುತ್ತದೆ. ಅಧ್ಯಕ್ಷ ಬಸರ್ ಅಲ್-ಅಸ್ಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನದಲ್ಲಿ ಬಂಡುಕೋರ ಪಡೆಗಳು ಕಳೆದ ವಾರ ಸಿರಿಯಾದಾದ್ಯಂತ ದಾಳಿಗಳನ್ನು ಪ್ರಾರಂಭಿಸಿದವು. 2011ರ ಅಂತರ್​ಯುದ್ಧದ ನಂತರ ಸಿರಿಯಾದಲ್ಲಿ ನಡೆದ ಮೊದಲ ದಾಳಿ ಇದಾಗಿದೆ.

ಕಳೆದ ಐದು ದಶಕಗಳಿಂದ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಸರ್ಕಾರ ಅಧಿಕಾರದಲ್ಲಿತ್ತು. ಇದೀಗ ಮೊದಲ ಬಾರಿಗೆ ಅವರ ಸರ್ಕಾರ ಪತನವಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net