ಜಾರ್ಖಂಡ್​ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ; ಮೂವರು ನಕ್ಸಲರ ಹತ್ಯೆ| Jharkhand

Untitled design (93)
Published on

Jharkhand: ಜಾರ್ಖಂಡ್​ನ ಗುಮ್ಲಾ ಜಿಲ್ಲೆಯ ಬಿಶುನ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ(ಸೆ.24) ಬೆಳಗಿನ ಜಾವ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್​ಕೌಂಟರ್​ನಲ್ಲಿ ನಿಷೇಧಿತ ಮಾವೋವಾದಿ ವಿಭಜಿತ ಗುಂಪು ಜಾರ್ಖಂಡ್ ಜನ ಮುಕ್ತಿ ಪರಿಷತ್(ಜೆಜೆಎಂಪಿ)ನ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಿಶುನ್‌ಪುರ ಪೊಲೀಸ್ ಠಾಣೆ ಪ್ರದೇಶದ ಕೆಚ್ಕಿಯ ರೋಗ್ರಿಟೋಲಿಯ ದಟ್ಟ ಕಾಡಿನಲ್ಲಿ ಮಾವೋವಾದಿಗಳಿರುವ ಬಗ್ಗೆ ಖಚಿತ ಮಾಹಿತಿ ಮೇರೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಬ್ರಜೇಶ್ ಯಾದವ್ ನೇತೃತ್ವದ ಜೆಜೆಎಂಪಿ ಸ್ಕ್ವಾಡ್ ತಂಡವನ್ನು ಪತ್ತೆ ಹೆಚ್ಚಿತು. ತಕ್ಷಣ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ನಕ್ಸಲರನ್ನು ಎನ್​ಕೌಂಟರ್ ಮಾಡಿವೆ.

ಮೃತರನ್ನು ಲಾಲು ಲೋಹರಾ, ಛೋಟು ಓರಾನ್ ಹಾಗೂ ಸುಜಿತ್ ಓರಾನ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಎಕೆ-47 ರೈಫಲ್ ಸೇರಿದಂತೆ ಮೂರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಲು ಲೋಹರಾ ಮತ್ತು ಛೋಟು ಓರಾನ್ ಇಬ್ಬರೂ ಉಪ-ವಲಯ ಕಮಾಂಡರ್‌ಗಳಾಗಿದ್ದರು. ಛೋಟು ಲೋಹರಾ ಅವರ ತಲೆಗೆ ಐದು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆಯಾಗಿತ್ತು ಎನ್ನಲಾಗಿದೆ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಇಬ್ಬರು ಬೇಕಾಗಿದ್ದರು. ಸುಜಿತ್ ಓರಾನ್ ಅವರ ತಂಡದಲ್ಲಿ ಕೇಡರ್ ಆಗಿ ಕೆಲಸ ಮಾಡುತ್ತಿದ್ದರು.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಲೋಹರ್ದಾಗಾ ಮತ್ತು ಗುಮ್ಲಾ ಗಡಿಗಳ ಬಳಿ ಮಾವೋವಾದಿಗಳ ಗುಂಪೊಂದು ಕಾಣಿಸಿಕೊಂಡಿದೆ ಎಂಬ ವಿಶ್ವಾಸಾರ್ಹ ಮೂಲಗಳಿಂದ ಬಂದ ಮಾಹಿತಿಯ ಮೇರೆಗೆ ಜಾರ್ಖಂಡ್ ಜಾಗ್ವಾರ್ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net