ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ 17 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ; ಎಫ್​ಐಆರ್ ದಾಖಲು| Swami Chaitanyananda Saraswati

Untitled design (92)
Published on

Swami Chaitanyananda Saraswati: ದೆಹಲಿಯ ಐಷಾರಾಮಿ ವಸಂತ್ ಕುಂಜ್ ಪ್ರದೇಶದಲ್ಲಿರುವ ಆಶ್ರಮವೊಂದರ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ 17 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಎಫ್​ಐಆರ್ ದಾಖಲಿಸಲಾಗಿದೆ ಎಂದು ಬುಧವಾರ (ಸೆ. 24) ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ವಿಭಾಗದಲ್ಲಿ ವಿದ್ಯಾರ್ಥಿವೇತನದೊಂದಿಗೆ ಸ್ನಾತಕೋತ್ತರ ನಿರ್ವಹಣಾ ಡಿಪ್ಲೊಮಾ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರು ಸ್ವಾಮಿ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ದೆಹಲಿ ಪೊಲೀಸರ ಮುಂದೆ ಒಟ್ಟು 32 ವಿದ್ಯಾರ್ಥಿನಿಯರು ಹೇಳಿಕೆ ದಾಖಲಿಸಿದ್ದು, ಅದರಲ್ಲಿ ಕನಿಷ್ಠ 17 ವಿದ್ಯಾರ್ಥಿನಿಯರು ಚೈತನ್ಯಾನಂದರು ತಮಗೆ ಅಶ್ಲೀಲ ಭಾಷೆ ಬಳಸಿ ಸಂದೇಶ ಕಳುಹಿಸಿದ್ದಾರೆ. ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಕೃತ್ಯಕ್ಕೆ ಮಹಿಳಾ ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಸಹ ಸಾಥ್ ನೀಡಿದ್ದಾರೆ. ಹಾಸ್ಟೆಲ್​ ವಾರ್ಡನ್​ಗಳು ಸಹ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರ ಹೇಳಿಕೆಗಳು ಮತ್ತು ಹೆಚ್ಚಿನ ವಿಚಾರಣೆಯ ಆಧಾರದ ಮೇಲೆ, ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 75(2), 79, ಮತ್ತು 351(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ದೆಹಲಿ ನೈಋತ್ಯ ಜಿಲ್ಲೆ ಉಪ ಪೊಲೀಸ್ ಆಯುಕ್ತ ಅಮಿತ್ ಗೋಯಲ್ ಮಾತನಾಡಿದ್ದು, ವಿದ್ಯಾರ್ಥಿನಿಯರ ಹೇಳಿಕೆಗಳ ಆಧಾರದ ಮೇಲೆ ಸ್ವಾಮಿ ಚೈತನ್ಯಾನಂದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಇತರೆ ಆರೋಪಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿದ್ದು, ಕೃತ್ಯ ನಡೆಸಿದ ಸ್ಥಳ ಮತ್ತು ಆರೋಪಿ ವಾಸಿಸುತ್ತಿದ್ದ ಸ್ಥಳದಲ್ಲಿ ಶೋಧ ನಡೆಸಿದ್ದಾರೆ.

ತನಿಖೆಯ ಸಮಯದಲ್ಲಿ ಪೊಲೀಸರು ಸ್ವಾಮೀಜಿಗೆ ಸೇರಿದ ಸಂಸ್ಥೆಯ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ ದುಬಾರಿ ಬೆಲೆಯ ವೋಲ್ವೋ ಕಾರನ್ನು ಪತ್ತೆ ಮಾಡಿದ್ದಾರೆ. ಆ ಕಾರಿಗೆ ವಿಶ್ವಸಂಸ್ಥೆಯ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ "39 UN 1" ಹೊಂದಿದ್ದು ಕಂಡು ಬಂದಿದೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿದ ಕಾರಣಕ್ಕೆ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 345(3), 318(4), 336(3), ಮತ್ತು 340(2) ಬಿಎನ್‌ಎಸ್ ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net