ವೋಟಿಗಾಗಿ ನೋಟು ಕೇಸ್; ಸಿಎಂ ರೇವಂತ್ ರೆಡ್ಡಿ, ಚಂದ್ರಬಾಬು ನಾಯ್ಡು ವಿರುದ್ಧ ಕ್ರಮಕ್ಕೆ ಸುಪ್ರೀಂಕೋರ್ಟ್​ಗೆ ಮನವಿ, ಯಾಕೆ?| Cash-For-Vote

Untitled design (90)
Published on

Cash-For-Vote: ತೆಲಂಗಾಣದಲ್ಲಿ 2016ರಲ್ಲಿ ನಡೆದಿದೆ ಎನ್ನಲಾದ ವೋಟ್‌ಗಾಗಿ ನೋಟು ಪ್ರಕರಣದ ಪ್ರಮುಖ ಆರೋಪಿ ಜೆರುಸಲೆಮ್ ಮುತ್ತಯ್ಯ ಸುಪ್ರೀಂಕೋರ್ಟ್​ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಪ್ರಕರಣದಲ್ಲಿ ತಾನೂ ಬಲಿಪಶು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಇಬ್ಬರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಬುಧವಾರ(ಸೆ. 24) ವರದಿಯಾಗಿದೆ.

ವೋಟ್​ಗಾಗಿ ನೋಟು ಪ್ರಕರಣದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದ ಒಂದು ದಿನದ ಬಳಿಕ ಸೆ. 23ರಂದು ಬರೆದಿರುವ ಪತ್ರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ನಾಟಕೀಯ ತಿರುವು ಪಡೆದುಕೊಂಡಿದೆ.  ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ. ಈ ಕೃತ್ಯಕ್ಕೆ ಅಂದಿನ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಸಹಚರ, ಪ್ರಸ್ತುತ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿರ್ದೇಶಿಸಿದ್ದರು ಎಂದು ಆರೋಪಿಸಿದ್ದಾರೆ.

ನಾಯ್ಡು ಅವರ ಪುತ್ರ ನರ ಲೋಕೇಶ್, ಇತರ ಟಿಡಿಪಿ ನಾಯಕರು ಹಾಗೂ ಹಿರಿಯ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಪಿತೂರಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ರೇವಂತ್ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಅವರ ಪ್ರಸ್ತುತ ಸ್ಥಾನಗಳಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದ್ದಾರೆ.

2016ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಟಿಆರ್‌ಎಸ್ ಶಾಸಕರೊಬ್ಬರಿಗೆ 5 ಕೋಟಿ ರೂ. ಲಂಚ ನೀಡುವಂತೆ ನನಗೆ ಆದೇಶಿಸಲಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಹೊಸ ಉನ್ನತ ಮಟ್ಟದ ತನಿಖೆ ನಡೆಯಬೇಕು. ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಕಾಂಗ್ರೆಸ್ ಎಂಬ ಎರಡು ಪ್ರಮುಖ ರಾಜಕೀಯ ಪಕ್ಷಗಳ ಮೇಲೆ ನಿಷೇಧ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

2016ರಲ್ಲಿ ತೆಲಂಗಾಣ ವಿಧಾನಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ ಬಿಆರ್​ಎಸ್​ ಶಾಸಕರಿಗೆ ಮತಚಲಾಯಿಸಲು 5 ಕೋಟಿ ರೂಪಾಯಿ ಲಂಚ ನೀಡಿದ ಆರೋಪ ಅಂದಿನ ಟಿಡಿಪಿ ಶಾಸಕರಾಗಿದ್ದ, ಪ್ರಸ್ತುತ ತೆಲಂಗಾಣ ಸಿಎಂ ಆಗಿರುವ ರೇವಂತ್ ರೆಡ್ಡಿ ವಿರುದ್ಧ ಕೇಳಿ ಬಂದಿತ್ತು. ಅದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಬಿಡುಗಡೆಯಾಗಿತ್ತು. ಜೊತೆಗೆ ಚಂದ್ರಬಾಬು ಸಿಎಂ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹ ಸೋರಿಕೆಯಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net