ಗಾಜಾದಲ್ಲಿನ ಯುದ್ಧ ನಿಲ್ಲಿಸಿದ್ರೆ ಮಾತ್ರ ಟ್ರಂಪ್ ನೊಬೆಲ್ ಪ್ರಶಸ್ತಿ ಗೆಲ್ಲಬಲ್ಲರು; ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್| Emmanuel Macron

Untitled design (88)
Published on

Emmanuel Macron: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜವಾಗಿಯೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಲು ಬಯಸಿದರೆ, ಅವರು ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸಬೇಕು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ (ಸೆ. 23) ಹೇಳಿದ್ದಾರೆ.

ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್‌ನ ಬಿಎಫ್‌ಎಂ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಶಕ್ತಿ ಟ್ರಂಪ್​ಗೆ ಮಾತ್ರ ಇದೆ ಎಂದು ಹೇಳಿದ್ದಾರೆ.

ಯುದ್ಧ ನಿಲ್ಲಿಸುವ ಬಗ್ಗೆ ಏನಾದರೂ ಮಾಡುವ ವ್ಯಕ್ತಿ ಇದ್ದರೆ ಅದು, ಅಮೆರಿಕಾದ ಅಧ್ಯಕ್ಷರಿಂದ ಸಾಧ್ಯ. ಅವರು ನಮಗಿಂತ ಹೆಚ್ಚಿನದನ್ನು ಮಾಡಬಲ್ಲರು. ನಾವು ಗಾಜಾದಲ್ಲಿ ಯುದ್ಧ ನಡೆಸಲು ಅನುವು ಮಾಡಲು ಶಸ್ತ್ರಾಸ್ತ್ರ ಪೂರೈಸುವುದಿಲ್ಲ, ಉಪಕರಣಗಳನ್ನು ಕೊಡುವುದಿಲ್ಲ ಎಂದು ಅಮೆರಿಕಾ ಹೇಳಿದ್ರೆ ಯುದ್ಧ ನಿಲ್ಲಬಹುದು ಎಂದು ತಿಳಿಸಿದ್ದಾರೆ.

ನಾನು ಇಂದು ಬೆಳಗ್ಗೆ ವಿಶ್ವಸಂಸ್ಥೆಯ ಅವರ ಭಾಷಣವನ್ನು ಕೇಳಿದ್ದೇನೆ. ಶಾಂತಿ ಸ್ಥಾಪನೆ ಬಗ್ಗೆ ಪುನರುಚ್ಚರಿಸಿದ್ದಾರೆ. 'ನನಗೆ ಶಾಂತಿ ಬೇಕು. ನಾನು ಏಳು ಸಂಘರ್ಷಗಳನ್ನು ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ.  ನೊಬೆಲ್ ಪ್ರಶಸ್ತಿಯನ್ನು ಬಯಸುತ್ತಿದ್ದಾರೆ. ಆದರೆ ಅವರು ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲಬಲ್ಲರು ಎಂದು ಹೇಳಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಡೊನಾಲ್ಡ್​ ಟ್ರಂಪ್, ತಮ್ಮ ಹೋರಾಟಗಳನ್ನು ನೆನಪಿಸಿಕೊಂಡಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ಶಾಂತಿ ಮಾತುಕತೆ ನಡೆಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಆದರೆ ಇದೇ ವೇಳೆ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ಮಾನ್ಯತೆಗೆ ಬೆಂಬಲ ನೀಡಿದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಪ್ರಯತ್ನಗಳನ್ನು ಟ್ರಂಪ್ ತಿರಸ್ಕರಿಸಿದ್ದು, ಇದು ಹಮಾಸ್ ಉಗ್ರಗಾಮಿಗಳಿಗೆ ಪ್ರತಿಫಲವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net