ನ್ಯಾಟೋ ಹುಟ್ಟಿದ್ದು ಹೀಗೆ! ಖ್ವಾಜಾ ಕನಸು ಕಟ್ಟಿದ್ದು ಹೇಗೆ?

13-68d2da001f5ef
Published on
ಕಳೆದೊಂದು ವಾರದಲ್ಲಿ ಡೊನಾಲ್ಡ್ ಟ್ರಂಪ್​ರ ಭಾರತ-ವಿರೋಧಿ ನಡೆಗಳ ಹೊರತಾಗಿ ಭಾರತೀಯ ಮಾಧ್ಯಮಗಳಲ್ಲಿ ದೊಡ್ಡದಾಗಿ ಚರ್ಚೆಗೊಳಗಾದ ವಿಷಯಗಳೆಂದರೆ ಪಶ್ಚಿಮದ ಸೇನಾ ಸಂಘಟನೆ ನ್ಯಾಟೋ ಮಾದರಿಯಲ್ಲಿ ಮುಸ್ಲಿಂ ದೇಶಗಳು ತಮ್ಮದೇ ಆದ ಸೇನಾ ಕೂಟವೊಂದನ್ನು ರಚಿಸಿಕೊಳ್ಳುವ ಅಗತ್ಯದ ಬಗ್ಗೆ ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ್ ನೀಡಿದ ಹೇಳಿಕೆ ಮತ್ತು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾಗಳ ನಡುವಿನ ರಕ್ಷಣಾ ಒಪ್ಪಂದ ಮತ್ತದರ ಅಣು ಆಯಾಮ. ಈ ಕುರಿತಾದ ಹುಯಿಲುಗಳನ್ನು ಅತ್ತ ಗುಡಿಸಿಹಾಕಿ ವಾಸ್ತವಾಂಶಗಳನ್ನು ‘ಜಗದಗಲ’ ಓದುಗರ ಮುಂದಿಡುವುದು ಈ ಲೇಖನದ ಉದ್ದೇಶ.

ಇದೇ ಸೆಪ್ಟೆಂಬರ್ 9ರಂದು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಕತಾರ್​ನ ರಾಜಧಾನಿ ದೋಹಾ ಮೇಲೆ ವಾಯುದಾಳಿ ಎಸಗಿ ಹಮಾಸ್​ಗೆ ಸಂಬಂಧಿಸಿದ ಕೆಲವರನ್ನು ಹತ್ಯೆಗೈದಿತಷ್ಟೇ. ಹಮಾಸ್ ಮತ್ತದರ ಪರವಾಗಿರುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಇದುವರೆಗೆ ಪ್ಯಾಲಿಸ್ತೀನಿ ಪ್ರದೇಶಗಳಾದ ವೆಸ್ಟ್ ಬ್ಯಾಂಕ್ ಮತ್ತು ಗಾಜಾ, ಲೆಬನಾನ್, ಸಿರಿಯಾ, ಯೆಮೆನ್ ಮತ್ತು ಇರಾನ್​ಗಳ ಮೇಲೆ ಒಂದಕ್ಕಿಂತ ಹೆಚ್ಚು ಬಾರಿ ದಾಳಿಯೆಸಗಿದೆ. ಆ ಪಟ್ಟಿಯಲ್ಲಿ ಈಗ ಆರನೆಯ ಹೆಸರಾಗಿ ಸೇರಿಕೊಂಡದ್ದು ಕತಾರ್. ಆದರೆ ಉಳಿದ ಐದು ದೇಶಗಳಿಗಿಂತ ಕತಾರ್ ಹಲವು ವಿಧಗಳಲ್ಲಿ ಭಿನ್ನ.

ಇಸ್ರೇಲ್​ನ ಶತ್ರುವಾದ ಹಮಾಸ್ ಗಾಜಾದ ನೆಲದಿಂದ ಆ ಯಹೂದಿ ರಾಷ್ಟದ ಮೇಲೆ ದಾಳಿ ಎಸಗಿದೆ, ಹೆಜ್ಬೊಲ್ಲಾ ಲೆಬಾನಾನ್ ನೆಲದಿಂದ ದಾಳಿಯೆಸಗಿದೆ, ಸಿರಿಯಾ ಸರ್ಕಾರಿ ಸೇನೆಯೇ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಕೈಗೊಂಡದ್ದುಂಟು, ಯೆಮೆನ್​ನಲ್ಲಿ ಈಗ ಆಡಳಿತಸೂತ್ರ ಹಿಡಿದಿರುವ ಹೂತಿಗಳೂ ಇಸ್ರೇಲ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಎಸಗುತ್ತಲೇ ಇದ್ದಾರೆ. ಇನ್ನು ಇರಾನ್-ಇಸ್ರೇಲ್ ವೈರದ ಬಗ್ಗೆ ಹೇಳುವುದೇ ಬೇಡ. ಹೀಗಾಗಿ ಆ ಎಲ್ಲ ದೇಶಗಳ ಮೇಲೆ ಇಸ್ರೇಲಿ ದಾಳಿ ಯಹೂದಿ ರಾಷ್ಟ್ರದ ಅಸ್ತಿತ್ವದ ಹೊಯ್ದಾಟ ಎಂದು ಸಮರ್ಥನೆಯನ್ನು ಪಡೆದುಕೊಳ್ಳಬಹುದು. ಆದರೆ ಕತಾರ್​ನ ನೆಲದಿಂದ ಯಾವುದೇ ಯುದ್ಧವಿಮಾನ, ಕ್ಷಿಪಣಿ ಅಥವಾ ಡ್ರೋನ್ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇದುವರೆಗೆ ಹಾರಿದ್ದಿಲ್ಲ.

ಹಮಾಸ್ ಬಗ್ಗೆ ಅಮೆರಿಕಾಗೆ ಯಾವ ಪ್ರೀತಿಯೂ ಇಲ್ಲ ಮತ್ತು ಲೆಬನಾನ್ ಕುರಿತಾಗಿ ವಾಷಿಂಗ್​ಟನ್​ನ ಧೋರಣೆ ಸರಿಸುಮಾರು ತಟಸ್ಥ. ಸಿರಿಯಾ, ಯೆಮೆನ್ ಮತ್ತು ಇರಾನ್​ಗಳಂತೂ ಅಮೆರಿಕಾದ ದಾಳಿಗೆ ನೇರವಾಗಿ ಗುರಿಯಾಗಿವೆ. ಆದರೆ ಕತಾರ್ ಬಗ್ಗೆ ಹೀಗೆ ಹೇಳಲಾಗುವುದಿಲ್ಲ. ಆ ಪುಟ್ಟ ಆದರೆ ಅತಿ ಶ್ರೀಮಂತ ಅರಬ್ ರಾಷ್ಟ್ರದೊಂದಿಗೆ ಅಮೆರಿಕಾದ ಘನಿಷ್ಟ ಸಂಬಂಧಗಳಿವೆ. ಅಲ್ಲಿ ಅಮೆರಿಕಾದ ಬೃಹತ್ ಅಲ್-ಉದೇದ್ ವಾಯುನೆಲೆ ಇದೆ, ಹಿಂದೊಮ್ಮೆ ಕತಾರ್ ಸುತ್ತಲಿನ ಅರಬ್ ದೇಶಗಳ ಜತೆ ವಿರಸ ಕಟ್ಟಿಕೊಂಡು ಏಕಾಂಗಿಯಾಗಿದ್ದಾಗ ಅದರ ಪರವಾಗಿ ನಿಂತು ಅದನ್ನು ಅರಬ್ ರಾಷ್ಟ್ರಗಳು ಮತ್ತೆ ತಮ್ಮೊಳಗೆ ಸೇರಿಸಿಕೊಳ್ಳುವಂತೆ ಮಾಡಿದ್ದು ಅಮೆರಿಕಾ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ. ಹೀಗಾಗಿ ಅವರ ಕುರಿತು ಕತಾರ್​ಗೆ ಪ್ರೀತಿ, ಅಭಿಮಾನ. ತನ್ನ ಅತಿದೊಡ್ಡ ಹಿತೈಷಿ ಟ್ರಂಪ್ ಎರಡನೆಯ ಬಾರಿಗೆ ಶ್ವೇತಭವನ ಪ್ರವೇಶಿಸಿದ್ದಕ್ಕೆ ಕತಾರ್ ಸಂಭ್ರಮಿಸಿದ್ದು ಅವರಿಗೆ ನಾನೂರು ಮಿಲಿಯನ್ ಡಾಲರ್ ಮೌಲ್ಯದ, ‘ಹಾರುವ ಅರಮನೆ’ ಎಂದೇ ಕರೆಯಲಾಗುವ ವಿಮಾನವೊಂದನ್ನು ಅವರಿಗೆ ಉಡುಗೊರೆಯಾಗಿ ಕೊಡುವ ಮೂಲಕ!

ಅಮೆರಿಕಾ ಜತೆ ಈ ಪ್ರಮಾಣದ ಘನಿಷ್ಟ ಸ್ನೇಹಸಹಕಾರಗಳಿದ್ದರೂ ಕತಾರ್ ಮೇಲೆ ಇಸ್ರೇಲ್ ಯಾವ ಹಿಂಜರಿಕೆಯೂ ಇಲ್ಲದೆ ದಾಳಿ ಎಸಗಿದೆ! ಅಂದರೆ ಅಮೆರಿಕಾದ ಸ್ನೇಹ ಕತಾರ್​ಗೆ ರಕ್ಷಣೆಯನ್ನೇನೂ ನೀಡಿಲ್ಲ. ಹೀಗೇಕೆ? ಈ ಪ್ರಶ್ನೆಗೆ ಉತ್ತರವನ್ನು ಸ್ವತಃ ಇಸ್ರೇಲಿ ಪ್ರಧಾನಮಂತ್ರಿ ಜೆಂಜಮಿನ್ ನೆತನ್ಯಾಹು ಮತ್ತು ವಿಶ್ವಸಂಸ್ಥೆಯಲ್ಲಿನ ಇಸ್ರೇಲಿ ರಾಯಭಾರಿ ಡ್ಯಾನಿ ಡೆನಾನ್ ನೀಡಿದ್ದಾರೆ. ಇಸ್ರೇಲ್ ವಿರುದ್ಧ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಹಮಾಸ್​ಗೆ ಆಶ್ರಯ ನೀಡಿದ್ದೇ ಕತಾರ್ ಎಸಗಿದ ಅಪರಾಧ ಎನ್ನುವುದು ಆ ಉತ್ತರದ ತಿರುಳು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಹೆಸರು ಸಿಲುಕಿಕೊಂಡದ್ದನ್ನು ನೋಡೋಣ. ಕತಾರ್ ಮೇಲೆ ಇಸ್ರೇಲಿ ದಾಳಿಯನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ನಿರ್ಣಯವೊಂದನ್ನು ಅಂಗೀಕರಿಸಿತು. ವಿಶೇಷವೆಂದರೆ ಖಂಡನೆಯ ಮಸೂದೆಯ ವಿರುದ್ಧ ಅಮೆರಿಕಾ ವಿಟೋ ಚಲಾಯಿಸಲಿಲ್ಲ. ನಂತರ ತಮ್ಮ ದೇಶದ ನಿಲುವನ್ನು ಪ್ರತಿಪಾದಿಸುವ ಅವಕಾಶವನ್ನು ಇಸ್ರೇಲಿ ರಾಯಭಾರಿ ಡೆನಾನ್ ಅವರಿಗೆ ನೀಡಲಾಯಿತು. ಅವಕಾಶವನ್ನು ಉಪಯೋಗಿಸಿಕೊಂಡ ರಾಯಭಾರಿ ಡೆನಾನ್, ಪಾಕಿಸ್ತಾನದಲ್ಲಿ ಅಡಗಿದ್ದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅನ್ನು ಅಮೆರಿಕಾದ ವಾಯುಸೇನೆ ಪಾಕಿಸ್ತಾನದೊಳಗೇ ನುಗ್ಗಿ ಹತ್ಯೆಗೈಯುವುದಾದರೆ, ತನ್ನ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನೆಸಗಿದ ಹಮಾಸ್​ನ ಸದಸ್ಯರು ಎಲ್ಲಿದ್ದಾರೋ ಅಲ್ಲಿಯೇ ದಾಳಿ ಮಾಡಿ ಅವರನ್ನು ಹತ್ಯೆಗೈಯುವ ಹಕ್ಕು ಇಸ್ರೇಲ್​ಗೆ ಇದೆ ಎಂದು ಹೇಳಿದರು. ಇಸ್ರೇಲಿ ರಾಯಭಾರಿಯಿಂದ ತನ್ನ ದೇಶದ ಉಲ್ಲೇಖವಾದದ್ದೇ ಪಾಕಿಸ್ತಾನಿ ರಾಯಭಾರಿ ಆಸಿಫ್ ಇಫ್ತಿಖಾರ್ ಮಧ್ಯೆ ಬಾಯಿ ಹಾಕಿ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಘಟಿಸಿದ್ದು ವಿಶ್ವಸಂಸ್ಥೆಯಲ್ಲಿ ಇದುವರೆಗೆ ಕಂಡು ಕೇಳರಿಯದ ಘಟನೆ, ಪಾಕಿಸ್ತಾನಕ್ಕೆ ಜಗತ್ತಿನ ಮುಂದೆ ಹಿಂದೆಂದೂ ಆಗಿರದಂತಹ ಅವಮಾನ. ಕೇವಲ ನಾಲ್ಕು ಸೆಕೆಂಡ್​ಗಳಲ್ಲಿ ಇಸ್ರೇಲಿ ರಾಯಭಾರಿ ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಹೆಸರಿಸಿಬಿಟ್ಟರು! ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕೆಂದು ಪಾಕಿಸ್ತಾನಿ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ್ ಕರೆ ನೀಡುವುದಕ್ಕೆ, ಆ ಒಕ್ಕೂಟವನ್ನು ‘ಇಸ್ಲಾಮಿಕ್ ನ್ಯಾಟೋ’ ಎಂದವರು ಹೆಸರಿಸಿದ್ದಕ್ಕೆ ಇದು ಕಾರಣ. ಆದರೆ ಅವರ ಈ ಮಾತು ವಾಸ್ತವಪ್ರಜ್ಞೆಯಿಂದ ಕೂಡಿದೆಯೇ ಮತ್ತು ಅವರ ಆಶಯ ಸಾಕಾರವಾಗುವ ಸಾಧ್ಯತೆ ಇದೆಯೇ ಎನ್ನುವುದನ್ನು ನೋಡೋಣ.

ಚಿಕ್ಕದಾಗಿ ‘ನ್ಯಾಟೋ’ ಎಂದು ಕರೆಯಲಾಗುವ "North Atlantic Treaty Organization' (ಉತ್ತರ ಅಟ್ಲಾಂಟಿಕ್ ಕೌಲು ಕೂಟ) ಸ್ಥಾಪನೆಯಾದದ್ದು 1949ರ ಏಪ್ರಿಲ್ 4ರಂದು. ಅದಕ್ಕೆ ಪ್ರೇರಣೆಯಾದದ್ದು ಅಂದಿನ ಜೋಸೆಫ್ ಸ್ಟಾ್ಯಲಿನ್ ನಾಯಕತ್ವದ ಸೋವಿಯತ್ ಯೂನಿಯನ್​ನ ನೀತಿಗಳಿಂದಾಗಿ. 1945ರ ಮೇ 8ರಂದು ನಾಝಿ ಜರ್ಮನಿ ಶರಣಾಗತವಾಗಿ, ಯುರೋಪ್​ನಲ್ಲಿ ಮಹಾಯುದ್ಧ ಅಧಿಕೃತವಾಗಿ ಅಂತ್ಯಗೊಂಡ ನಂತರ ಸೋವಿಯತ್ ಯೂನಿಯನ್ ಯುದ್ಧದ ಕೊನೆಯ ಹಂತದಲ್ಲಿ ತಾನು ಜರ್ಮನ್ ಆಕ್ರಮಣದಿಂದ ಮುಕ್ತಗೊಳಿಸಿದ್ದ ಪೂರ್ವ ಯುರೋಪ್​ನ ಪೋಲ್ಯಾಂಡ್, ಝೆಕೊಸ್ಲೊವೇಕಿಯಾ, ಹಂಗೆರಿ, ರೊಮಾನಿಯಾ ಮತ್ತು ಬಲ್ಗೇರಿಯಾಗಳಲ್ಲಿ ತನ್ನ ನಿಯಂತ್ರಣದ ಕಮ್ಯೂನಿಸ್ಟ್ ಸರ್ಕಾರಗಳನ್ನು ಕಟ್ಟಿ ಕೂರಿಸಿತು. ಅದು ಸೇನಾ ಹಿಡಿತ ಸ್ಥಾಪಿಸಿದ್ದ ಜರ್ಮನಿಯ ಪೂರ್ವಭಾಗದಲ್ಲಾದದ್ದೂ ಅದೇ.

ಸೋವಿಯತ್ ಕಮ್ಯೂನಿಸ್ಟ್ ವಿಸ್ತರಣಾವಾದ ಅಷ್ಟಕ್ಕೇ ನಿಂತಿದ್ದರೆ ಹೆಚ್ಚಿನ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಬಲ್ಗೇರಿಯಾದ ದಕ್ಷಿಣಕ್ಕಿದ್ದ ಗ್ರೀಸ್ ಮತ್ತದರ ಪೂರ್ವ ಟರ್ಕಿಗಳಲ್ಲೂ ತನ್ನ ನಿಯಂತ್ರಣದ ಕಮ್ಯೂನಿಸ್ಟ್ ಸರ್ಕಾರಗಳನ್ನು ಸ್ಥಾಪಿಸಲು ಯೋಜಿಸಿ, ಅಲ್ಲಿನ ಕಮ್ಯೂನಿಸ್ಟರು ಅಥೆನ್ಸ್ ಮತ್ತು ಅಂಕಾರಾಗಳ ಅಧಿಕೃತ ಸರ್ಕಾರಗಳ ವಿರುದ್ಧ ದಂಗೆಯೇಳುವ ವ್ಯವಸ್ಥೆ ಮಾಡಿತು. ಒಂದುವೇಳೆ ಮಾಸ್ಕೋದ ಪ್ರಯತ್ನ ಯಶಸ್ವಿಯಾಗಿ, ಆಗ್ನೇಯ ಯುರೋಪ್​ನ ಆ ಎರಡು ಆಯಕಟ್ಟಿನ ದೇಶಗಳು ಸೋವಿಯತ್ ನಿಯಂತ್ರಣಕ್ಕೆ ಒಳಪಟ್ಟರೆ ಸೋವಿಯತ್ ಸೇನೆ ಪೂರ್ವ ಮೆಡಿಟರೇನಿಯನ್ ತೀರವನ್ನು ತಲುಪುತ್ತಿತ್ತು ಮತ್ತು ಆ ಮುಲಕ ವರ್ಷವಿಡೀ ಕಾರ್ಯಶೀಲವಾಗಿರುವಂತಹ ಸಮಶೀತೋಷ್ಣವಲಯದ ಬಂದರೊಂದನ್ನು ಪಡೆದುಕೊಳ್ಳುವ ರಷ್ಯನ್ನರ ಶತಮಾನದಷ್ಟು ಹಳೆಯದಾದ ಬಯಕೆ ಪೂರ್ಣಗೊಳ್ಳುತ್ತಿತ್ತು.

ಪಶ್ಚಿಮ ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕಾಗೆ ಅಪಾಯ ಕಂಡದ್ದು ಇಲ್ಲಿ. ಯಾಕೆಂದರೆ ಒಮ್ಮೆ ಪೂರ್ವ ಮೆಡಿಟರೆನಿಯನ್ ತೀರಕ್ಕೆ ಸೋವಿಯತ್ ಯೂನಿಯನ್ ಕಾಲಿಟ್ಟರೆ ಅದರ ರ್ತಾಕ ಮುಂದುವರಿಕೆಯಾಗಿ ಅದು ಸುಯೆಜ್ ಕಾಲುವೆ ಮೂಲಕ ಹಿಂದೂ ಮಹಾಸಾಗರವನ್ನೂ ಜಿಬ್ರಾಲ್ಟರ್ ಜಲಸಂಧಿಯ ಮೂಲಕ ಅಟ್ಲಾಂಟಿಕ್ ಸಾಗರವನ್ನೂ ಸುಲಭವಾಗಿ ಪ್ರವೇಶಿಸಬಹುದಾಗಿತ್ತು. ಹಾಗಾದಲ್ಲಿ ಪೂರ್ವ ಯುರೋಪ್​ನಲ್ಲಿ ಮಾಡಿದ್ದನ್ನು ಮಾಸ್ಕೋ ಇಡೀ ಜಗತ್ತಿಗೇ ವಿಸ್ತರಿಸಿ ಹಲವೆಡೆ ಕಮ್ಯೂನಿಸ್ಟ್ ದಂಗೆ ಅಥವಾ ಕ್ರಾಂತಿಗಳನ್ನು ಪ್ರಾಯೋಜಿಸಬಹುದಿತ್ತು. ಜಾಗತಿಕ ರಂಗದಲ್ಲಿ ಇಂತಹದು ಆಗದಂತೆ ತಡೆಯಬೇಕಾದರೆ ಗ್ರೀಸ್ ಮತ್ತು ಟರ್ಕಿಗಳು ಮಾಸ್ಕೋ ಕೈಗೆ ಬೀಳುವುದನ್ನು ಮೊದಲು ತಡೆಯಬೇಕು ಎಂದು ಅಮೆರಿಕಾದ ಹ್ಯಾರಿ ಟ್ರೂಮನ್ ಆಡಳಿತ ಲೆಕ್ಕಹಾಕಿತು. ಅದಕ್ಕಾಗಿ ಅಥೆನ್ಸ್ ಮತ್ತು ಅಂಕಾರಾಗಳಲ್ಲಿನ ಅಧಿಕೃತ ಸರ್ಕಾರಗಳಿಗೆ ಸೇನಾ ಮತ್ತು ಆರ್ಥಿಕ ಸಹಕಾರ ನೀಡಿ ಅವು ಮಾಸ್ಕೋ-ಪ್ರಾಯೋಜಿತ ಕಮ್ಯೂನಿಸ್ಟ್ ದಂಗೆಗಳನ್ನು ಅಡಗಿಸಲು ಶಕ್ತವಾಗುವಂತೆ ಮಾಡುವುದು ಸೂಕ್ತ ವಿಧಾನ ಎನ್ನುವುದು ಅಮೆರಿಕಾದ ತರ್ಕವಾಯಿತು.

ಇದನ್ನು ಅಧ್ಯಕ್ಷ ಟ್ರೂಮನ್ 1947ರ ಮಾರ್ಚ್ 11ರಂದು ಜಗತ್ತಿಗೆ ಘೊಷಿಸಿದ್ದು ಹೀಗೆ: "I believe it shall be the policy of the United States to support free people who are resisting attempted subjugation by armed minorities or by external pressure. ಇದೇ ಇತಿಹಾಸದಲ್ಲಿ ದಾಖಲಾಗಿರುವ ಪ್ರಸಿದ್ಧ Truman Doctrine (ಟ್ರೂಮನ್ ಸಿದ್ಧಾಂತ). ಈ ಸಿದ್ಧಾಂತ ತಕ್ಷಣವೇ ಜಾರಿಗೆ ಬಂದು ಕಮ್ಯೂನಿಸ್ಟ್ ದಂಗೆಗಳನ್ನು ಅಡಗಿಸಲು ಅಗತ್ಯವಾದ ಸೇನಾ ಮತ್ತು ಹಣಕಾಸಿನ ನೆರವು ಅಮೆರಿಕಾದಿಂದ ಗ್ರೀಸ್ ಮತ್ತು ಟರ್ಕಿಗಳಿಗೆ ಹರಿದುಬಂತು. ಪರಿಣಾಮವಾಗಿ ಪೂರ್ವ ಮೆಡಿಟರೇನಿಯನ್ ತೀರಕ್ಕೆ ತಲುಪುವ ರಷ್ಯನ್ನರ ಕನಸು ಕನಸಾಗಿಯೇ ಉಳಿಯಿತು.

ಆದರೆ ಇದನ್ನು ಶಾಶ್ವತ ಯಶಸ್ಸು ಎಂದು ಟ್ರೂಮನ್ ಆಡಳಿತ ತಿಳಿಯಲಿಲ್ಲ. ಸೋವಿಯತ್ ವಿಸ್ತರಣಾದ ಹೀಗೆ ತಲೆಯೆತ್ತಿದಾಗೆಲ್ಲ ತಾತ್ಪೂರ್ತಿಕ ಉಪಾಯಗಳ ಮೊರೆಹೋಗುವುದರ ಬದಲು ಒಂದು ಶಾಶ್ವತ ವ್ಯವಸ್ಥೆಯನ್ನು ರೂಪಿಸಿ ಸದಾ ಸಿದ್ಧವಾಗಿರಿಸಿಕೊಂಡರೆ ಆಗ ಗ್ರೀಸ್ ಮತ್ತು ಟರ್ಕಿಗಳಲ್ಲಿ ಮಾಡಿದಂತಹ ದುಸ್ಸಾಹಸಗಳಿಗೆ ಮಾಸ್ಕೋ ಮುಂದಾಗುವುದನ್ನು ತಡೆಯಬಹುದು, ಅಷ್ಟರ ಮಟ್ಟಿಗೆ ಯುರೋಪ್​ನಲ್ಲಿ ಶಾಂತಿ ಕಾಪಾಡಿಕೊಳ್ಳಬಹುದು ಎಂದು ರ್ತಸಿದ ಟ್ರೂಮನ್ ಆಡಳಿತ ಆ ಕುರಿತಾಗಿ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳೊಂದಿಗೆ ಮಾತುಕತೆ ಆರಂಭಿಸಿತು. ಅದು ಯಶಸ್ವಿಯಾಗಿ, ಪಶ್ಚಿಮ ಯುರೋಪ್​ನ 13 ದೇಶಗಳು ಮತ್ತು ತನ್ನ ಉತ್ತರದ ನೆರೆದೇಶ ಕೆನಡಾವನ್ನು ಸೇರಿಸಿಕೊಂಡು ಅಮೆರಿಕ 1949ರ ಏಪ್ರಿಲ್ 4ರಂದು ನ್ಯಾಟೋ ಸ್ಥಾಪಿಸಿ ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್​ನಲ್ಲಿ ಕೇಂದ್ರ ಕಚೇರಿಯನ್ನು ರೂಪಿಸಿತು.

ಈ ಮುಕ್ಕಾಲು ಶತಮಾನದಲ್ಲಿ ನ್ಯಾಟೋ ಸಂಖ್ಯಾಬಲದಲ್ಲಿ ವ್ಯತ್ಯಾಸಗಳಾಗಿವೆ. ಗ್ರೀಸ್ ಮತ್ತು ಟರ್ಕಿಗಳು ಒಕ್ಕೂಟಕ್ಕೆ ಸೇರಿದ್ದು, ಸ್ಪೇನ್ ಹೊರನಡೆದದ್ದು ಶೀತಲ ಸಮರ ಕಾಲದಲ್ಲೇ ಆಗಿಹೋಗಿದೆ. ನ್ಯಾಟೋ ತನ್ನ ಮುಂದುವರಿಕೆಯ ಕುರಿತಾಗಿ ಪ್ರಶ್ನೆಯನ್ನು ಎದುರಿಸಿದ್ದು 1990ರಲ್ಲಿ ಶೀತಲ ಸಮರ ಅಂತ್ಯಗೊಂಡಾಗ. ಸೋವಿಯತ್ ಅಪಾಯವನ್ನು ತಡೆಗಟ್ಟಲು ಸ್ಥಾಪನೆಯಾದ ನ್ಯಾಟೋ ಸೋವಿಯತ್ ಯೂನಿಯನ್ ಕುಸಿದು, ಶೀತಲ ಸಮರ ಅಂತ್ಯಗೊಂಡ ಮೇಲೆ ಮುಂದುವರಿಯುವುದರ ಅಗತ್ಯವಿದೆಯೇ, ಮುಂದುವರಿಕೆಯಲ್ಲಿ ಅರ್ಥವಿದೆಯೇ ಎಂಬ ಪ್ರಶ್ನೆಗಳು ಆಗ ಚರ್ಚೆಗೊಳಗಾದದ್ದುಂಟು.

ಆ ಪ್ರಶ್ನೆಗಳಿಗೆ ತಡೆ ಬಿದ್ದದ್ದು ‘ನ್ಯಾಟೋ ಯುರೋಪ್​ಗಷ್ಟೇ ಸೀಮಿತವಾಗಿ ಉಳಿಯುವುದಿಲ್ಲ, ಅದು ಭೌಗೋಳಿಕವಾಗಿ ವಿಸ್ತರಿಸುತ್ತದೆ’ ಎಂದು ನ್ಯಾಟೋ ಕೂಟದ ಮಹಾ ಕಾರ್ಯದರ್ಶಿ ಮ್ಯಾನ್​ಫ್ರೆಡ್ ವೂರ್ನರ್ 1990ರ ಜನವರಿಯಲ್ಲಿ ಹೇಳಿದಾಗ. ಅವರ ಮಾತಿನ ಅರ್ಥ ಇನ್ನು ಮುಂದೆ ಕಮ್ಯೂನಿಸಂನ ಬದಲು ಇಸ್ಲಾಮಿಕ್ ಮೂಲಭೂತವಾದ ಪ್ರಜಾಪ್ರಭುತ್ವವಾದಿ ಜಗತ್ತನ್ನು ಕಾಡಲಿದೆ, ಅದನ್ನು ನಿಗ್ರಹಿಸುವ ಜಬಾಬ್ದಾರಿಯನ್ನು ನ್ಯಾಟೋ ತಾನು ತೆಗೆದುಕೊಳ್ಳುತ್ತದೆ, ಅದಕ್ಕಾಗಿ ಅದರ ಕಾರ್ಯಕ್ಷೇತ್ರ ಪಶ್ಚಿಮ ಏಷ್ಯಾಗೂ ವಿಸ್ತರಿಸಲ್ಪಡುತ್ತದೆ ಎಂದಾಗಿತ್ತು. ಆ ಪ್ರಕಾರವೇ ನ್ಯಾಟೋ ಇರಾಕಿ ಆಕ್ರಮಣದಿಂದ ಕುವೈತ್ ಅನ್ನು ವಿಮೋಚನೆಗೊಳಿಸಿತು. ಅಲ್ಲದೆ ‘ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲಿನ ಆಕ್ರಮಣವನ್ನು ಇಡೀ ಸೇನಾ ಕೂಟದ ಮೇಲಿನ ಆಕ್ರಮಣವೆಂದು ಪರಿಗಣಿಸಲಾಗುವುದು’ ಎಂಬ ಒಪ್ಪಂದ 5ನೆಯ ವಿಧಿಯ ಪ್ರಕಾರ ಅಮೆರಿಕಾ ಮೇಲಿನ 9/11 ದಾಳಿಯನ್ನು ಒಟ್ಟಾರೆ ನ್ಯಾಟೋ ಮೇಲಿನ ದಾಳಿಯೆಂದು ಪರಿಗಣಿಸಿ ನ್ಯಾಟೋ ಪಡೆಗಳು ಅಫ್ಘಾನಿಸ್ತಾನವನ್ನೂ ಪ್ರವೇಶಿಸಿದ್ದೂ ಆಯಿತು. ಅಂದರೆ 1997ರಲ್ಲಿ ಸರ್ಬಿಯಾ ವಿರುದ್ಧದ ಕಾರ್ಯಾಚರಣೆಯನ್ನು ಹೊರತುಪಡಿಸಿದರೆ ನ್ಯಾಟೋ ಇದುವರೆಗೆ ದೊಡ್ಡ ಪ್ರಮಾಣದಲ್ಲಿ ಸೇನಾ ಕಾರ್ಯಾಚರಣೆ ನಡೆಸಿರುವುದು ಇಸ್ಲಾಮಿಕ್ ದೇಶಗಳ ವಿರುದ್ಧವೇ! ಖ್ವಾಜಾ ಆಸಿಫ್​ರಿಗೆ ಈ ಸತ್ಯ ನೆನಪಿರಬಹುದು ಎಂದು ತಿಳಿಯೋಣ.

ಈ ಇತಿಹಾಸದ ಪರಿಚಯದೊಂದಿಗೆ, ನ್ಯಾಟೋ ಸ್ಥಾಪನೆಯನ್ನು ಅಗತ್ಯವಾಗಿಸಿದಂತಹ ಸನ್ನಿವೇಶ ಇಸ್ಲಾಮಿಕ್ ಜಗತ್ತಿನಲ್ಲಿ ಸೃಷ್ಟಿಯಾಗಿದೆಯೇ ಮತ್ತು ಪಶ್ಚಿಮ ಯುರೋಪಿಯನ್ ರಾಷ್ಟ್ರಗಳ ಅಂದಿನ ರಕ್ಷಣಾ ಸ್ಥಿತಿಗಳನ್ನು ಇಂದಿನ ಮುಸ್ಲಿಂ ದೇಶಗಳ ರಕ್ಷಣಾ ಸ್ಥಿತಿಗಳಿಗೆ ಸಮೀಕರಿಸಬಹುದೇ, ಟ್ರಂಪ್ ಆಡಳಿತದ ಇಂದಿನ ನೀತಿನಿಲುವುಗಳು ಮೂಲ ನ್ಯಾಟೋ ಮತ್ತು ಉದ್ದೇಶಿತ ಇಸ್ಲಾಮಿಕ್ ನ್ಯಾಟೋಗಳನ್ನು ಮುಖಾಮುಖಿಯಾಗಿಸುತ್ತವೆಯೇ ಎಂಬ ಪ್ರಶ್ನೆಗಳನ್ನು ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ ವಿಶ್ಲೇಷಿಸೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net