

ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞರು. ದೇಶ ವಿದೇಶಗಳಲ್ಲಿ ಅರ್ಥನೀತಿ ಕುರಿತು ವ್ಯಾಪಕವಾಗಿ ಅಧ್ಯಯನ ನಡೆಸಿದ್ದ ಅವರು ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಕಾಲಾವಧಿಯಲ್ಲಿ ಅರ್ಥಸಚಿವರಾಗಿ ಭಾರತವನ್ನು ಉದಾರೀಕರಣದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಈಗ ಇತಿಹಾಸ. ಅಲ್ಲಿಂದ ಮುಂದೆ ಭಾರತದ ಸ್ಥಾನ ಜಾಗತಿಕ ಅರ್ಥವ್ಯವಸ್ಥೆಯ ನಕಾಶೆಯಲ್ಲಿ ಗೌರವದ ಸ್ಥಾನ ಪಡೆಯುವುದು ಸಾಧ್ಯವಾಯಿತು. ಆರ್ಥಿಕ ವಿಷಯದ ಪರಿಣತರೊಬ್ಬರು ಭಾರತದ ಪ್ರಧಾನಿಯಾದದ್ದು ಒಂದು ವಿಶೇಷ ಘಟನೆ. ಮನಮೋಹನ್ ಸಿಂಗ್ ಜಾಗತೀಕರಣದ ರೂವಾರಿಯಾಗಿದ್ದರು ಎಂದರೆ ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ.
ಜನನ: 1932ರ ಸೆಪ್ಟೆಂಬರ್ 26 ಪತ್ನಿ: ಗುರ್ಶರಣ್ ಕೌರ್ ಶಿಕ್ಷಣ: ಸೇಂಟ್ ಜಾನ್ಸ್ ಕಾಲೇಜ್, ಕೇಂಬ್ರಿಡ್ಜ್ (1956-57) ಮಕ್ಕಳು: ಅಮೃತ್ ಸಿಂಗ್, ದಮನ್ ಸಿಂಗ್, ಉಪಿಂದರ್ ಸಿಂಗ್ ಏರಿಳಿತದ ಬಾಲ್ಯ: ಮನಮೋಹನರ ಬಾಲ್ಯ ಅನೇಕ ಏರಿಳಿತಗಳಿಂದ ಕೂಡಿತ್ತು. ತಾಯಿ ಟೈಫಾಯಿಡ್ಗೆ ಬಲಿಯಾದರು. ಮನಮೋಹನ್ ಸಿಂಗ್ ತಂದೆ ಒಂದು ಸಣ್ಣ ವ್ಯಾಪಾರದ ವಹಿವಾಟು ಇಟ್ಟುಕೊಂಡಿದ್ದರು. ಮೊದಲ ಹೆಂಡತಿ ತೀರಿದ ಬಳಿಕ ಮನಮೋಹನ್ ತಂದೆಯ ಕಡೆಯ ಅಜ್ಜ-ಅಜ್ಜಿ ಮನೆಯಲ್ಲಿ, ಓದಬೇಕಾಗಿ ಬಂತು. ಆ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಸರ್ವೆಸಾಮಾನ್ಯ. ತಾತ ಸಂತ್ ಸಿಂಗ್ ಮತ್ತು ಅಜ್ಜಿ ಜನ್ನುದೇವಿಯರದ್ದೂ ಅಂಥ ಒಂದು ಕೂಡುಕುಟುಂಬ. ಅಪ್ಪನಿಗೆ ಮಗನ ಮೇಲೆ ಪ್ರೀತಿ ಇತ್ತು. ಆದರೂ ಆತ ಮಗುವನ್ನು ಅಜ್ಜಿಯ ಮನೆಯಲ್ಲಿ ಬಿಟ್ಟ ಮೇಲೆ ನೋಡಲು ಬಂದದ್ದು, ಅದೂ ಹತ್ತು ವರ್ಷಗಳ ಅವಧಿಯಲ್ಲಿ ಕೇವಲ ಎರಡೇ ಸಲ.
ಅರ್ಥಶಾಸ್ತ್ರಜ್ಞರಾಗಿ ಕೊಡುಗೆ: ಮನಮೋಹನ್ಸಿಂಗ್ ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ಆರ್ಥಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಪ್ರಧಾನಿಗೆ ಆರ್ಥಿಕ ಸಲಹೆಗಾರ ಇತ್ಯಾದಿ ಆಗಿ ಸೇವೆ ಮಾಡಿದ್ದರು. ಆರ್ಥಿಕ ವಿಷಯದಲ್ಲಿ ಅತ್ಯಂತ ಸ್ಪಷ್ಟತೆ ಹೊಂದಿದ್ದ ಅವರು ಈ ವಿಷಯದಲ್ಲಿ ಎಂಥ ದೊಡ್ಡವರ ಮೂಗುತೂರಿಸುವಿಕೆಯನ್ನು ಇಷ್ಟಪಡುತ್ತಿರಲಿಲ್ಲ. ರಾಜೀವ್ ಗಾಂಧಿ ಕಾಲದಲ್ಲಿ ಡಾ. ಮನಮೋಹನ್ಸಿಂಗ್ ರಿಸರ್ವ್ ಬ್ಯಾಂಕ್ ಗವರ್ನರ್, ಆಗ ಸ್ವರಾಜ್ಪಾಲ್ಗೆ ಅನೇಕರು ಹಣಕಾಸು ವಿಷಯದಲ್ಲಿ ಸವಲತ್ತು ಒದಗಿಸಲು ಯತ್ನಿಸಿದ್ದರು. ಆ ವ್ಯಕ್ತಿ ರಾಜೀವರಿಗೆ ‘ಬೇಕಾದವರು.’ ಆದರೆ ಮನಮೋಹನ್ ಈ ವಿಷಯ ತಿಳಿದಿದ್ದರೂ ಆತನಿಗೆ ವಿಶೇಷ ಸವಲತ್ತು ದೊರಕಿಸಿಕೊಡಲಿಲ್ಲ.
ಆರ್ಬಿಐ ಗವರ್ನರ್ ಆಗಿ...: ಮನಮೋಹನ್ ಸಿಂಗ್ ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು. ಅವರ ಸೇವಾವಧಿ 1982 (ಸೆಪ್ಟೆಂಬರ್ 16)ರಿಂದ 1985ರ ( ಜನವರಿ 14) ವರೆಗೆ ವಿಸ್ತರಿಸಿತ್ತು. ಇವರು ಐ.ಜಿ.ಪಟೇಲ್ ತರುವಾಯ ಮತ್ತು ಅಮಿತಾವ್ ಘೊಷ್ಗೂ ಮೊದಲು ಈ ಸ್ಥಾನದಲ್ಲಿದ್ದರು. ಈ ಅವಧಿಯಲ್ಲಿ ಹೊರಗಿನ ರಾಜಕೀಯ ಒತ್ತಡಗಳಿಗೆ ಮಣಿಯದೆ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ ಎತ್ತಿಹಿಡಿದ ಗವರ್ನರ್ ಎಂಬ ಹೆಗ್ಗಳಿಕೆಗೆ ಮನಮೋಹನ್ ಪಾತ್ರರಾದರು. ಈ ಸ್ಥಾನದಲ್ಲಿದ್ದ ಇವರು ದೇಶದ ವಿತ್ತ ಮಂತ್ರಿ ಮತ್ತು ಎರಡು ಸಲ ಪ್ರಧಾನ ಮಂತ್ರಿಯಾಗಿದ್ದರು ಎಂಬುದು ಸ್ಮರಣಾರ್ಹ.
ರಾಜ್ಯಸಭೆಯ ನಂಟು: ಮನಮೋಹನ್ಸಿಂಗ್ ಎರಡು ಸಲ ಭಾರತದ ಪ್ರಧಾನಿಯಾಗಿದ್ದರು. ಆದರೆ ಅವರು ಈ ಅತ್ಯಂತ ಗೌರವಾಸ್ಪದ ಹುದ್ದೆಗಾಗಿ ಎಂದೂ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಅವರು ಸಂಸತ್ತಿಗೆ ಪ್ರತಿಬಾರಿಯೂ ಪ್ರವೇಶಿಸಿದ್ದು ರಾಜ್ಯಸಭೆಯ ಮೂಲಕ. ಅವರಿಗಿಂತ ಮೊದಲು ಬಂದ ಮತ್ತು ನಂತರ ಬಂದ ಎಲ್ಲ ಪ್ರಧಾನಿಗಳೂ ಲೋಕಸಭಾ ಸದಸ್ಯರಾಗಿದ್ದವರೇ. ಮನಮೋಹನ್ ಎಂದೂ ಜನಪ್ರಿಯ -ಜನನಾಯಕ ರಾಜಕಾರಣಿಯಾಗಲಿಲ್ಲ. 1998ರಿಂದ 2004ರವರೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. 2007ರಲ್ಲಿ ಮತ್ತು ಜೂನ್ 2013ರಲ್ಲಿ ರಾಜ್ಯಸಭೆಗೆ ಪುನರಾಯ್ಕೆಯಾದರು. ನಂತರ 2019ರಿಂದ 2024ರ ಏಪ್ರಿಲ್ವರೆಗೆ ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
ಸಿಖ್ ಜನಾಂಗದ ಪ್ರತಿನಿಧಿ: ಭಾರತದ 14ನೇ ಪ್ರಧಾನಿಯಾಗಿದ್ದವರು, ಎರಡು ಸಲ ಈ ಹುದ್ದೆ ಅಲಂಕರಿಸಿದವರು ಮನಮೋಹನಸಿಂಗ್. ದೇಶದ ಸ್ವಾತಂತ್ರ್ಯ ಸಮರದಲ್ಲಿ ಸಿಕ್ಖರ ಪಾತ್ರ ದೊಡ್ಡದು. ದೇಶದ ಬಿಡುಗಡೆ ನಂತರ ವಿವಿಧ ಪಕ್ಷಗಳು ಸಿಕ್ಖರನ್ನು ತಮ್ಮ ಬಳಿ ಸೆಳೆಯಲು ನೋಡಿದವು. ಇದಕ್ಕೆ ಅವರು ಅಲ್ಪಸಂಖ್ಯಾತರು ಎಂಬುದು ಒಂದು ಮುಖ್ಯ ಕಾರಣ. ಕಾಂಗ್ರೆಸ್ ಕೂಡ ಈ ಜಾಡು ಹಿಡಿಯಿತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಜೇಲ್ಸಿಂಗ್ ಅವರನ್ನು ರಾಷ್ಟ್ರಪತಿ ಮಾಡಿದ್ದರು. ಸಿಕ್ಖ ಸಮುದಾಯಕ್ಕೆ ಸೇರಿದ ಮನಮೋಹನ್ ಅವರನ್ನು ಪಿ.ವಿ.ನರಸಿಂಹರಾವ್ ಬಳಿಕ ಸೋನಿಯಾ ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ಕಾಂಗ್ರೆಸ್ 1984ರ ದೆಹಲಿಯ ಸಿಕ್ಖರ ಹತ್ಯಾಕಾಂಡದ ಬಳಿಕ ಆ ಸಮುದಾಯದ ನಡುವೆ ಮುಖ ಕಳೆದು ಕೊಂಡಿತ್ತು. ಮನಮೋಹನ್ ಅವರನ್ನು ಮುಂದೊಡ್ಡುವುದರ ಮೂಲಕ ಸಿಕ್ಖರ ವಿಶ್ವಾಸ ಗಳಿಸಲು ಯತ್ನಿಸಿತು. ಇದರೊಂದಿಗೆ ಮನಮೋಹನರ ವಿದ್ಯಾರ್ಹತೆ, ಕೇಂದ್ರ ಅರ್ಥಸಚಿವರಾಗಿ ಮಾಡಿದ್ದ ಸಾಧನೆಗಳೂ ಕೆಲಸ ಮಾಡಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ನಿಭಾಯಿಸುವದು ಸುಲಭ ಎಂಬುದು ಸೋನಿಯಾಗೆ ತಿಳಿದಿತ್ತು. ಪಿ.ವಿ.ಎನ್. ರಂಥ ಚಾಣಾಕ್ಷ ಮತ್ತು ಸೋನಿಯಾ ಬಿಗಿಹಿಡಿತಕ್ಕೆ ಸಿಗದ ವ್ಯಕ್ತಿ ಅವರಿಗೆ ಬೇಕಿರಲಿಲ್ಲ.
ಅವಮಾನ ನುಂಗಿಕೊಂಡರು...: ಮನಮೋಹನ್ಸಿಂಗ್ ಅವರೆಂದೂ ತಮ್ಮ ವೈಚಾರಿಕ ಆರ್ಥಿಕ ಸ್ಪಷ್ಟತೆಯನ್ನು ಲೋಕದೆದುರು ಡಂಗುರ ಹೊಡೆಯಲು ಹೋದವರಲ್ಲ.ಜತೆಗೆ ಅವರು ಎಂದೂ ಪಕ್ಷದ ವಿರುದ್ಧ ಪಿಸುದನಿಯಲ್ಲೂ ಮಾತನಾಡಿದವರಲ್ಲ. ಅವರ ಕಾಂಗ್ರೆಸ್ ಯಾತ್ರೆ ಪ್ರಧಾನಿಯಾಗುವವರೆಗೆ ಬಹಳ ಸುಗಮವಾಗಿತ್ತು. ಅವರನ್ನು ಪಕ್ಷದ ಒಳಗೂ ಕೂಡ ಒಬ್ಬ ಅಕಡೆಮಿಕ್ ವಿದ್ವಾಂಸ, ತಜ್ಞ ಎಂಬಂತೆ ನೋಡಲಾಗುತ್ತಿತ್ತು. ಮುಂದೆ ಪ್ರಧಾನಿಯಾದ ಮೇಲೆ ಪಕ್ಷದ ವರಿಷ್ಠೆ ಸೋನಿಯಾ ಮತ್ತು ಕೆಲವೊಮ್ಮೆ ಅವರ ಮಗ ರಾಹುಲ್ ಅವರೊಂದಿಗೆ ಹಲವು ಸಲ ಮಾತನಾಡುವ ರ್ಚಚಿಸುವ ಅವಕಾಶ ಮೇಲಿಂದ ಮೇಲೆ ಮನಮೋಹನರಿಗೆ ಬಂತು. ಆಗಲೂ ಕೂಡ ಅವರಿಗೆ ಆದ ಅವಮಾನ, ಮುಜುಗರಗಳನ್ನು ಮನಮೋಹನ್ ಮೌನವಾಗಿ ನುಂಗಿಕೊಂಡರು.
ಪಿ.ವಿ. ನರಸಿಂಹರಾವ್- ಮನಮೋಹನ್ ಭಲೇ ಜೋಡಿ: 1991ರಲ್ಲಿ ಮನಮೋಹನ್ಸಿಂಗ್ ಅವರು ಪಿ.ವಿ.ನರಸಿಂಹರಾವ್ ಅವರ ಕೇಂದ್ರ ಮಂತ್ರಿ ಮಂಡಲದ ವಿತ್ತ ಮಂತ್ರಿಯಾದರು. ಆಗ ದೇಶ ಆರ್ಥಿಕವಾಗಿ ಹಿರಿದಾದ ನಿರ್ಣಯ ತೆಗೆದುಕೊಳ್ಳುವ ಐತಿಹಾಸಿಕ ತಿರುವಿನಲ್ಲಿತ್ತು. ದೇಶವನ್ನು ‘ಲೈಸನ್ಸ್ ಪರ್ವಿುಟ್ ಕೋಟಾ ರಾಜ್’ನಿಂದ ಬಿಡುಗಡೆಗೊಳಿಸಿ ಮುಕ್ತ ಆರ್ಥಿಕ ನೀತಿಯತ್ತ ತೆಗೆದುಕೊಂಡು ಹೋಗಬೇಕಿತ್ತು. ವಿಪಕ್ಷಗಳಾದ ಬಿಜೆಪಿ ಮತ್ತು ಸಿಪಿಎಂ ಈ ಬದಲಾವಣೆಗೆ ವಿರುದ್ಧವಿದ್ದವು. ಡಂಕಲ್ ಗ್ಯಾಟ್ ಒಪ್ಪಂದವನ್ನು ಸಮರ್ಥಿಸಿ ಕೊಳ್ಳುವ ಹೊಣೆ ನರಸಿಂಹರಾವ್ ನೇತೃತ್ವದ ಸರ್ಕಾರಕ್ಕಿತ್ತು. ಅದರಲ್ಲೂ ಈ ಹೊಣೆ ಮನಮೋಹನ್ಸಿಂಗ್ ಅವರ ಮೇಲಿತ್ತು. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದವರು ಅವರು. ಜಗದೀಶ ಭಗವತಿಯಂಥ ಅರ್ಥಶಾಸ್ತ್ರಜ್ಞರನ್ನು ಬಿಟ್ಟರೆ ಬೇರೆಯವರು ಹೊಸ ಆರ್ಥಿಕ ನೀತಿಯನ್ನಾಗಲೀ, ಜಾಗತೀಕರಣವನ್ನಾಗಲೀ ಸಮರ್ಥಿಸಲಿಲ್ಲ. ಅಂದರೆ ಅರ್ಥಕ್ಷೇತ್ರದಲ್ಲಿ ದೊಡ್ಡ ಬೌದ್ಧಿಕ ಬಿರುಗಾಳಿ ಎದ್ದಾಗ ಶಾಂತವಾಗಿ ಅದನ್ನು ಎದುರಿಸಿ ದೇಶವನ್ನು ಪಾರು ಮಾಡಿದವರು ಮನಮೋಹನ್ಸಿಂಗ್. ಮುಂದೆ ಬಂದ ವಾಜಪೇಯಿ ನೇತೃತ್ವದ ಎನ್ಡಿಎ ಕೂಡ ಮನಮೋಹನ್ಸಿಂಗ್ ಜಾರಿಗೊಳಿಸಿದ್ದ ಹೊಸ ಹಣಕಾಸು ಸಂಗತಿಗಳನ್ನು ನಿರಾಕರಿಸಲಿಲ್ಲ ಎಂಬುದು ಗಮನಾರ್ಹ.
ಲೇಖಕ ಮನಮೋಹನ್ ಸಿಂಗ್: ಮನಮೋಹನ್ ಸಿಂಗ್ ಅವರು ಪುಸ್ತಕಗಳ ಲೇಖಕರೂ ಹೌದು. ‘ಐಛಜಿಚ’ಠ ಉಟಟ್ಟಠಿ ಖ್ಟಛ್ಞಿಛಠ ಚ್ಞಛ ಕ್ಟಟಠಟಛ್ಚಿಠಿಠ ್ಛ್ಟ ಖಛ್ಝಿfಖ್ಠಠಠಿಚಜ್ಞಿಛಿಛ ಎಟಡಿಠಿಜ‘ ಇದು ಅವರು ಬರೆದಿರುವ ಅರ್ಥಶಾಸ್ತ್ರದ ಪುಸ್ತಕ. ಇದಲ್ಲದೆ ಅವರು ಅನೇಕ ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದರು.
ಮನಮೋಹನ್ ಸಿಂಗ್ ಅವರು ತಮ್ಮ ಆತ್ಮಕತೆ ಬರೆಸಬೇಕಾದ ಸಂದರ್ಭ ಬಂದುದು ಸಂಜಯ್ ಬರುವಾ ಅವರು ತಮ್ಮನ್ನು ಕುರಿತು ಬರೆದ ‘ಆಕ್ಸಿಡೆಂಟಲ್ ಪ್ರೖೆಂ ಮಿನಿಸ್ಟರ್’ ವಿವಾದಾಸ್ಪದ ಪುಸ್ತಕದ ಕಾರಣದಿಂದ. 2014ರ ಲೋಕಸಭಾ ಚುನಾವಣೆ ಸಮಯಕ್ಕೆ ಸರಿಯಾಗಿ ಸಂಜಯ್ ಈ ಪುಸ್ತಕ ಹೊರತಂದರು. ಅದು ಕೋಲಾಹಲ ಉಂಟು ಮಾಡಿತು. ಎರಡನೇ ಸಲ ದೇಶದ ಪ್ರಧಾನಿಯಾದ ಬಳಿಕ ಮನಮೋಹನ್ರು ಸೋನಿಯಾ ಕೈಗೊಂಬೆಯಾದರು ಎಂಬುದನ್ನು ಕೆಲವು ಆಧಾರಗಳ ಮೂಲಕ ತೋರಿಸಿದ ಪುಸ್ತಕ ಇದು. ಇದಕ್ಕೆ ಉತ್ತರವಾಗಿ ಮನಮೋಹನ್ರ ಆಪ್ತರು ‘ಸ್ಟ್ರಿಕ್ಟ್ಲಿ ಪರ್ಸನಲ್’ ಎಂಬ ಪುಸ್ತಕ ತಂದರು. ಇದರಲ್ಲಿ ಸಂಜಯ್ ಬರುವಾ ಪುಸ್ತಕಕ್ಕೆ ಉತ್ತರ ಕೊಡುವ ಬದಲು ಮನಮೋಹನ್ ಸಿಂಗ್ ಅವರ ಬಾಲ್ಯ, ಶಿಕ್ಷಣದ ವಿಷಯಗಳಿಗೆ ಹೆಚ್ಚು ಮಹತ್ವ ನೀಡಲಾಯಿತು. ಸೋನಿಯಾ ಮತ್ತು ತಮ್ಮ ನಡುವಿನ ಅಂತರ ಕುರಿತು ಬಾಯ್ಬಿಡದ ಮನಮೋಹನ್ ಈ ವಿಷಯದಲ್ಲಿ ಮೌನ ಕಾಪಾಡಿಕೊಂಡರು.
ಖಾ-ಉ-ಜಾ ರೂವಾರಿ: ‘‘ಖಾ-ಉ-ಜಾ’’ ಎಂದರೆ ಖಾಸಗೀಕರಣ-ಉದಾರೀಕರಣ- ಜಾಗತೀಕರಣಗಳನ್ನು ಜಾರಿಗೆ ತಂದು ಭಾರತವನ್ನು ವಿಶ್ವದ ಆರ್ಥಿಕ ನಕಾಶೆಯಲ್ಲಿ ಹೊಸದಾಗಿ ನಿಲ್ಲಿಸಿದವರು ಮನಮೋಹನಸಿಂಗ್ ಮತ್ತು ನರಸಿಂಹರಾವ್. ಪಿ.ವಿ.ಎನ್ ಮೆದುಳು ಮತ್ತು ಮನಮೋಹನರ ಮೆದುಳಿನ ಕೂಸು ಈ ಹೊಸ ಆರ್ಥಿಕತೆ. ದೇಶದ ಹಣಕಾಸು ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹಣದುಬ್ಬರವಿತ್ತು. ಹಣಕಾಸು ಕೊರತೆ ನಿಯಂತ್ರಿಸಬೇಕಿತ್ತು. ಕೈಗಾರಿಕಾ ಬಿಗಿ ನೀತಿ ಸಡಿಲಿಸಬೇಕಿತ್ತು. ಇದನ್ನೆಲ್ಲಾ ಪಿವಿಎನ್ ಎದುರು ಮನಮೋಹನ್ ಬಿಡಿಸಿ ಹೇಳಿದರು. ಪ್ರಧಾನಿ ಸಲಹೆಯಂತೆ ಸರ್ವಪಕ್ಷಗಳ ಸಭೆ ಕರೆಯಲಾಯಿತು. ಮನಮೋಹನ್ಸಭೆಯಲ್ಲಿ ಎಲ್ಲವನ್ನೂ ಬಿಡಿಸಿ ಮಿತ್ರಪಕ್ಷಗಳು ಮತ್ತು ವಿಪಕ್ಷಗಳ ಎದುರು ಇರಿಸಿದರು. ಜೊತೆಗೆ ಹೊಸ ಆರ್ಥಿಕತೆ ಫಲ ನೀಡಲು ಎರಡರಿಂದ ಮೂರು ವರ್ಷಗಳು ಬೇಕು ಎಂದೂ ಹೇಳಿದರು.
ಅಹ್ಲುವಾಲಿಯಾ ಜತೆ: ಮನಮೋಹನ್ ಸಿಂಗ್ ಎಲ್ಲರೊಡನೆ ಸೌಹಾರ್ದವಾಗಿರುತ್ತಿದ್ದರೂ ಯಾರನ್ನೂ ತೀರಾ ಹಚ್ಚಿಕೊಳ್ಳುತ್ತಿರಲಿಲ್ಲ. ಅವರಿಗೆ ಮೊದಲಿನಿಂದಲೂ ಮಾಂಟೆಕ್ಸಿಂಗ್ ಅಹ್ಲುವಾಲಿಯಾ ಜತೆ ಸ್ನೇಹವಿತ್ತು. ಪಂಜಾಬಿ ಹಿನ್ನೆಲೆ, ಭಾಷೆ, ಅರ್ಥಶಾಸ್ತ್ರದಲ್ಲಿ ತಜ್ಞತೆಯ ಮಟ್ಟದ ಪರಿಣತಿ, ಸಮಾನ ಮನಸ್ಕತೆ ಇವು ಅವರಿಬ್ಬರು ನಿಕಟಗೊಳ್ಳಲು ಕಾರಣಗಳು. 1970ರ ದಶಕದಲ್ಲಿ ಗೆಳೆತನ ಶುರುವಾಯಿತು. ಆಗ ಮಾಂಟೆಕ್ ವಾಷಿಂಗ್ಟನ್ ಡಿ.ಸಿ.ಯಲ್ಲಿದ್ದರು. ಕೆಲಸದ ನಿಮಿತ್ತ ಮನ ಮೋಹನ್ ಅಲ್ಲಿಗೆ ಹೋಗಿ ಬರುತ್ತಿದ್ದರು. 1979ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಮಾಂಟೆಕ್ ಕೆಲಸ ಮಾಡುವುದರಲ್ಲಿ ಮನಮೋಹನ್ ಪಾತ್ರವಿತ್ತು.
ಬೀದಿಗಿಳಿದಿದ್ದ ಮನಮೋಹನ್!: ಶಾಂತ ಸ್ವಭಾವಕ್ಕೆ ಹೆಸರಾದ ಮನನೋಹನ್ ಸಿಂಗ್ ಯಾವುದೇ ರಾಜಕೀಯ ಘರ್ಷಣೆಗಳಿಗೆ ಹೋದದ್ದು ತೀರಾ ಕಮ್ಮಿ. ಇದಕ್ಕೆ ಒಂದು ಅಪವಾದವೆಂದರೆ 2016ರಲ್ಲಿ ಮನಮೋಹನ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾಡಿದ ಪ್ರತಿಭಟನೆ. ದೆಹಲಿಯ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿಕೊಂಡು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಘೊಷಣೆ ಹಾಕಿದರು. ಮೋದಿಯವರು ಪ್ರಜಾಪ್ರಭುತ್ವ ನಾಶ ಮಾಡಲು ಯತ್ನಿಸಿದ್ದಾರೆ ಎಂಬ ಗುರುತರ ಆಪಾದನೆ ಮಾಡಿದರು, ಬಂಧನಕ್ಕೆ ಒಳಗಾಗಿ ಬಿಡುಗಡೆಯಾದರು. ‘ಲೋಕತಂತ್ರ ಬಚಾವೋ’ ಆಂದೋಲನದ ಹೆಸರಿನಲ್ಲಿ ನಡೆಸಿದ ಈ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದುದು ಒಂದು ವಿಶೇಷ ಘಟನೆ ಎನ್ನಬಹುದು.
ಮಕ್ಕಳಿಗೆ ತಾಕಿದ ಬಿಸಿ: ದೇಶದಲ್ಲಿ ಬದಲಾವಣೆ ಗಾಳಿ ಮೊದಲು ಬಿಸಿಗಾಳಿಯಾಗಿತ್ತು. ಆಗ ಅದರ ಫಲವನ್ನು ಸಿಂಗ್ ಮಕ್ಕಳೂ ಅವರ ವೃತ್ತಿಜೀವನದಲ್ಲಿ ಎದುರಿಸಬೇಕಾಯಿತು. ಮಗಳು ದಮನ್ಸಿಂಗ್ ಕೆಲಸ ಮಾಡುವ ಕಡೆ ಅವರ ಅನೇಕ ಸಹೋದ್ಯೋಗಿಗಳು ಬಹಿರಂಗವಾಗಿ ಸಿಂಗ್ ತಂದ ಬದಲಾವಣೆಗಳನ್ನು ನಿಂದಿಸಿದರು. ಈ ಕಟುಟೀಕೆ ಕೇಳಲು ಸಿಂಗ್ ಕುಟುಂಬದವರಿಗೆ ಕಷ್ಟವಾಗುತ್ತಿತ್ತು. ವಿಚಾರಸಂಕಿರಣಗಳಲ್ಲಿ ತನ್ನನ್ನು ಸಿಂಗ್ ಅವರ ಮಗಳು ಎಂದು ಯಾರೂ ಗುರುತಿಸಿ ತನ್ನ ಮೂಲಕ ತಂದೆಯನ್ನು ಟೀಕಿಸದಿರಲಿ ಎಂದು ಮಗಳು ಮನಸ್ಸಿನಲ್ಲಿ ಪ್ರಾರ್ಥಿಸುತ್ತಿದ್ದರು. ದಿನ ಕಳೆದಂತೆ ಪರಿಸ್ಥಿತಿ ಬದಲಾಯಿಸಿತು. ಕುಟುಂಬದ ಒಳಗೂ ಹೊರಗೂ ತಂಗಾಳಿ ಬೀಸಲಾರಂಭಿಸಿತು. ಏಕೆಂದರೆ ಅಂದುಕೊಂಡದ್ದಕ್ಕಿಂತ ಮೊದಲೇ ಸಿಂಗ್ ಹಣಕಾಸಿನ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು.
ಭ್ರಷ್ಟರಲ್ಲ, ಆದರೆ...: 2ಜಿ ಸ್ಪೆಕ್ಟ್ರಂ ಟೆಲಿಕಾಂ ಹಗರಣ ಮನಮೋಹನ್ ಸಿಂಗ್ ನಾಯಕತ್ವದ ಯುಪಿಎ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿತು. ಸ್ವತಃ ಮನಮೋಹನ್ ಸಿಂಗ್ ಭ್ರಷ್ಟರಲ್ಲದಿರಬಹುದು, ಆದರೆ ಅವರು ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟರು ಎಂಬುದು ಬಹುತೇಕರ ಅಭಿಪ್ರಾಯ. ಅದೇ ರೀತಿ ಕಲ್ಲಿದ್ದಲು ಹಗರಣವೂ ಅವರ ಕೀರ್ತಿಗೆ ಮಸಿ ಬಳಿದ ಘಟನೆ. ಯಾರನ್ನೂ ದಂಡಿಸದ, ಸದಾ ಸೋನಿಯಾ ಗಾಂಧಿಗೆ ಅನುವರ್ತಿಯಾಗಿರುವ ಮನಮೋಹನ್ ಸಿಂಗ್ ನಡವಳಿಕೆ ರಾಜಕೀಯದಲ್ಲೇ ಅನೇಕರಿಗೆ ಹಿಡಿಸಲಿಲ್ಲ. ಮನಮೋಹನ್ ಸಿಂಗ್ ಅವರನ್ನು ಎಲ್.ಕೆ. ಆಡ್ವಾಣಿ, ‘‘ಅವರು ದುರ್ಬಲರು. 10 ಜನಪಥದಿಂದ ಆದೇಶ ಬರುವವರೆಗೂ ಅವರೇನೂ ಕೆಲಸ ಮಾಡುವವರಲ್ಲ’’ ಎಂದು ವ್ಯಂಗ್ಯವಾಡಿದ್ದುಂಟು. ಕಲ್ಲಿದ್ದಲು ಮತ್ತು ಟೆಲಿಕಾಂ ಹಗರಣಗಳು ನೂರು ಗುಣಗಳನ್ನು ಒಂದು ಮಸಿ ತಿಂದಿತು ಎಂಬ ಮಾತಿನಂತೆ ಪ್ರತಿಭಾಶಾಲಿ ಪ್ರಧಾನಿಯ ಆಡಳಿತಕ್ಕೆ ಕಪ್ಪು ಮಸಿ ಬಳಿದವು. 2014ರ ಲೋಕಸಭಾ ಚುನಾವಣೆ ವೇಳೆಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಈ ಹಗರಣಗಳ ಲಾಭ ಮಾಡಿಕೊಂಡು, ಅಧಿಕಾರಕ್ಕೆ ಬಂದವು.
ಪ್ರಧಾನಿಯಾಗಿ ಹೆಜ್ಜೆಗುರುತು
ಸಾಧನೆ ಗರಿ
ನನ್ನ ಸಹೋದ್ಯೋಗಿಯಾಗಿದ್ದ ಮನಮೋಹನ್ ಸಿಂಗ್ ಅತ್ಯಂತ ತಾಳ್ಮೆಯ ವ್ಯಕ್ತಿ. ಅವರೊಬ್ಬ ಅತ್ಯಂತ ಬುದ್ಧಿವಂತ ಅರ್ಥಶಾಸ್ತಜ್ಞ. ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಅವರು ಇತಿಹಾಸದಲ್ಲಿ ಉಳಿಯಲಿದ್ದಾರೆ.
| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ
ಮನಮೋಹನ್ ಸಿಂಗ್ ಅವರು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಭಾರತವನ್ನು ಮುನ್ನಡೆಸಿದರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳುವಳಿಕೆಯು ರಾಷ್ಟ್ರವನ್ನು ಪ್ರೇರೇಪಿಸಿತ್ತು. ನಾನು ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ. ಲಕ್ಷಾಂತರ ಜನರು ಅವರನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
| ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ
ದೂರದೃಷ್ಟಿಯ ಅರ್ಥಶಾಸ್ತ್ರಜ್ಞ. ದೇಶದ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಆರ್ಥಿಕ ಸುಧಾರಣೆಗಳ ಮೂಲಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಿದ್ದಾರೆ. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ.
| ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾನು ಮೊದಲ ಬಾರಿಗೆ ಕರ್ನಾಟಕದ ಸಿಎಂ ಆಗಿದ್ದೆ. ನಮ್ಮ ಸರ್ಕಾರದ ಬಜೆಟ್ ಕಾರ್ಯಕ್ರಮಗಳಿಗೆ ಅವರ ಪೋ›ತ್ಸಾಹ ಎಂದೂ ಮರೆಯಲಾಗದು. ಸಿಂಗ್ ನೇತೃತ್ವದ ಸರ್ಕಾರದ ಆಹಾರ ಹಕ್ಕು ಕಾಯಿದೆಯಂತಹ ಅನೇಕ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದವು. ಅವರ ಪರಂಪರೆ ತಲೆಮಾರುಗಳಿಗೆ ಸ್ಪೂರ್ತಿ.
| ಸಿದ್ದರಾಮಯ್ಯ ಮುಖ್ಯಮಂತ್ರಿ