

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಇಲಾಖೆ ಹುದ್ದೆಗಳಿಗೆ ನೇಮಕ ಹಾಗೂ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕರೊನಾ ಕಾರಣಕ್ಕೆ ಆರ್ಥಿಕ ಸ್ಥಿತಿ ಸುಧಾರಣೆ, ಮಿತವ್ಯಯ ಸಾಧಿಸಲೆಂದು 2021-22ನೇ ಸಾಲಿನಲ್ಲಿ ನಿರ್ಬಂಧ ವಿಧಿಸಿದ್ದರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ. ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಶಾಸನಾತ್ಮಕ ವಿಶೇಷ ಸ್ಥಾನಮಾನ ಹಾಗೂ ಅಭಿವೃದ್ಧಿ, ವಿಶೇಷ ಅನುದಾನ ಬಳಕೆಗೂ ಅಡ್ಡಿಯಾಗಿದೆ ಎಂಬ ಕೂಗಿಗೆ ಸರ್ಕಾರ ಓಗೊಟ್ಟಿದೆ. ವೃಂದ, ಬ್ಯಾಕ್ಲಾಗ್ ಸೇರಿ ಹೊಸ ಹುದ್ದೆಗಳ ಸೃಜನೆ, ನೇರ ನೇಮಕಕ್ಕೆ ವಿಧಿಸಿದ್ದ ತಡೆ ತೆರವುಗೊಳಿಸಿ, ಆರ್ಥಿಕ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ. ಆಡಳಿತ ಇಲಾಖೆಗಳ ಅಪರ, ಪ್ರಧಾನ ಅಥವಾ ಕಾರ್ಯದರ್ಶಿಗಳ ಹಂತದಲ್ಲಿಯೇ ನೇಮಕ ಪ್ರಕ್ರಿಯೆ ಮುಂದುವರಿಸಿ, ನಿಯಮಾನುಸಾರ ಭರ್ತಿ ಮಾಡಿಕೊಳ್ಳಬೇಕು ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಸೂಚಿಸಿದ್ದಾರೆ.