ಒತ್ತಡ ಅಂದಿದ್ದಕ್ಕೆ 100ಕ್ಕೂ ಹೆಚ್ಚು ಉದ್ಯೋಗಿಗಳು ಕಿಕ್​ಔಟ್​? ಟೀಕೆಗಳ ಸುರಿಮಳೆ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟ ಸಂಸ್ಥೆ! | Employees

ವಿಜಯವಾಣಿ - 2024-12-10T125851.391
Published on

ನೋಯ್ಡಾ: ಹೋಮ್ ಬ್ಯೂಟಿ ಮತ್ತು ಸ್ಪಾ ಸೇವೆ ಒದಗಿಸುವ 'ಯೆಸ್​ ಮ್ಯಾಡೆಮ್'​ ಸಂಸ್ಥೆಯೊಂದು ತನ್ನ ಉದ್ಯೋಗಿಗಳು (Employees) ಒತ್ತಡ ಹೆಚ್ಚಾಗುತ್ತಿದೆ ಎಂದು ದೂರು ನೀಡಿದ್ದಕ್ಕೆ ಬರೋಬ್ಬರಿ 100ಕ್ಕೂ ಅಧಿಕ ಕೆಲಸಗಾರರನ್ನು ಕ್ಷಣಮಾತ್ರದಲ್ಲಿ ಕಿತ್ತುಬಿಸಾಡಿದ ಬಗ್ಗೆ ವರದಿಯೊಂದು ಜಾಲತಾಣದಲ್ಲಿ ವ್ಯಾಪಕ ಸದ್ದು ಮಾಡಿತ್ತು. ಈ ಸುದ್ದಿ ನೋಡಿದ ನೆಟ್ಟಿಗರು ಕಂಪನಿ ವಿರುದ್ಧ ತೀವ್ರ ಕಿಡಿಕಾರಿದ್ದು, ಇದೆಂಥಾ ವರ್ತನೆ? ಉದ್ಯೋಗಿಗಳ ಯೋಗಕ್ಷೇಮ, ಆರೋಗ್ಯ ಇದೆಲ್ಲವೂ ಒಂದು ಸಂಸ್ಥೆಯ ಜವಾಬ್ದಾರಿ. ಹೀಗಿರುವಾಗ ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದವರು ಏಕಾಏಕಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದರೆ, ಅವರ ಮುಂದಿನ ದಿಕ್ಕೇನು? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದರು. ಕಡೆಗೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಯೆಸ್​ ಮ್ಯಾಡೆಮ್, ಟೀಕೆ, ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ಮೂರು ಪುಟಗಳ ಸುದೀರ್ಘ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವ ಸಂಸ್ಥೆ, " ಒತ್ತಡ ಎಂದು ಹೇಳಿದ್ದಕ್ಕೆಲ್ಲ ಕೆಲಸದಿಂದ ವಜಾಗೊಳಿಸುವಷ್ಟು ಅಮಾನವೀಯರು ನಾವಲ್ಲ. ಇಲ್ಲಿ ಯಾರನ್ನೂ ವಜಾಗೊಳಿಸಲಾಗಿಲ್ಲ. ನಮ್ಮ ತಂಡವು ಒಂದು ಕುಟುಂಬದಂತಿದೆ, ಮತ್ತು ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಉತ್ಸಾಹವೇ ನಮ್ಮ ಯಶಸ್ಸಿನ ಅಡಿಪಾಯ. ಹೀಗಿರುವಾಗ ನಾವ್ಯಾಕೆ ಅವರನ್ನು ಹೊರ ಕಳಿಸೋಣ. ಅಸಲಿಗೆ ಇಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ" ಎಂದಿದೆ.

ಆಕ್ರೋಶಭರಿತ ಪದಗಳು

"ಕೆಲಸದ ಒತ್ತಡವನ್ನು ಗಂಭೀರ ಸಮಸ್ಯೆಯಾಗಿ ಎತ್ತಿ ತೋರಿಸುವ ಯೋಜಿತ ಪ್ರಯತ್ನವಿದು. ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಮತ್ತು ಆಕ್ರೋಶಭರಿತ ಪದಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ" ಎಂದು ಉಲ್ಲೇಖಿಸಿದೆ.

ಕೆಲಸದಿಂದ ಕೊಂಚ ಬ್ರೇಕ್

"ಈ ಬಗ್ಗೆ ಜನರು ಸಿಡಿದೆದ್ದು ಮಾತನಾಡುವಾಗ, ಅವರ ಕಾಳಜಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಸಲಿಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿಲ್ಲ. ಬದಲಿಗೆ, ಅವರಿಗೆ ಕೆಲಸದಿಂದ ಕೊಂಚ ಬ್ರೇಕ್ ನೀಡಲಾಗಿದೆ. ಅವರ ಒತ್ತಡವನ್ನು ಇಳಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ. ರೆಸ್ಟ್​ ಜತೆಗೆ ಉತ್ಸಾಹದಿಂದ ಮರಳಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಅಷ್ಟೇ" ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net