

ಸಾಗರ: ಶ್ರಮ ಮತ್ತು ಏಕಾಗ್ರತೆ ಉತ್ತಮ ಲಿತಾಂಶ ತರಲು ಸಾಧ್ಯವಾಗುತ್ತದೆ. ಪದವಿ ಮತ್ತು ಉದ್ಯೋಗದ ದೃಷ್ಟಿಯಿಂದ ಪದವಿಪೂರ್ವ ಶಿಕ್ಷಣವು ಭವಿಷ್ಯದ ನಿರ್ಧಾರ ಮತ್ತು ಆಯ್ಕೆಗಳಿಗೆ ಸಹಕಾರಿಯಾಗಿರುತ್ತದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ಹೇಳಿದರು.
ಸಾಗರದ ನೆಹರು ಮೈದಾನದಲ್ಲಿರುವ ಎಂಡಿಎ್ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ದೊಡ್ಡ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಅವಮಾನಗಳನ್ನು ಗೆಲ್ಲಲು ಶಿಕ್ಷಣ ಅಗತ್ಯ. ಕೀಳರಿಮೆ, ಆತಂಕಗಳಿಂದ ಕುಗ್ಗಬಾರದು. ವೇಗವಾಗಿ ಬೆಳೆಯುತ್ತಿರುವ ಭಾರತದಲ್ಲಿ ಹೊಸಹೊಸ ಬಗೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಸವಾಲನ್ನು ಸಮರ್ಥವಾಗಿ ಎದುರಿಸಲು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ್ ಎಂ. ಭಂಡಾರಿ ಮಾತನಾಡಿ, ಉತ್ತಮ ಅಂಕ ಗಳಿಸುವ ಜತೆಗೆ ಭಾಷಾ ಸಾಮರ್ಥ್ಯ, ಸಂವಹನ ಕೌಶಲಗಳನ್ನು ವಿದ್ಯಾರ್ಥಿ ಸಮೂಹ ವೃದ್ಧಿಸಿಕೊಳ್ಳಬೇಕು. ಬರವಣಿಗೆ ಮತ್ತು ಮಾತನಾಡುವ ಕೌಶಲ ಸುಧಾರಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಚಾರ್ಯ ಪಿ.ಡಿ.ನಾರಾಯಣಮೂರ್ತಿ, ಉಪ ಪ್ರಾಚಾರ್ಯ ಜಿ.ಪಿ.ಶ್ರೀಪಾದ, ವಿದ್ಯಾರ್ಥಿಗಳಾದ ಸುಪ್ರಿಯಾ, ಜಿನೇಶ್ ಪೀಟರ್ ಮಾತನಾಡಿದರು. ಎಂಡಿಎಫ್ ಖಜಾಂಚಿ ಕೆ.ಕವಲಕೋಡು ವೆಂಕಟೇಶ್, ಜಂಟಿ ಕಾರ್ಯದರ್ಶಿ ಎಂ.ಆರ್.ಸತ್ಯನಾರಾಯಣ, ಉಪನ್ಯಾಸಕರು ಇದ್ದರು.