

ಕಾರ್ಗಲ್: ಗ್ರಾಮೀಣ ಭಾಗದ ಹಿಂದುಳಿದ ಪ್ರದೇಶಗಳ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಭಾರಂಗಿ ಹೋಬಳಿ ವ್ಯಾಪ್ತಿಯ ಇಡುವಾಣಿ ಸಮೀಪದ ಹೆನ್ನಿಬೈಲು ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆ ಅಭಿವೃದ್ಧಿ ಕಾಣದ ಭಾರಂಗಿ ಹೋಬಳಿ ವ್ಯಾಪ್ತಿಯ ಉರುಳುಗಲ್ಲು, ಮೇಘಾನೆ ಹಾಗೂ ಶ್ರೀಕ್ಷೇತ್ರ ಭೀಮೇಶ್ವರ ದೇಸ್ಥಾನದ ರಸ್ತೆ ಅಭಿವೃದ್ಧಿಪಡಿಸಲು ತೊಡಕಾಗಿರುವ ಅರಣ್ಯ ಇಲಾಖೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸ್ಪಷ್ಟತೆ ಕೇಳಿ ದೆಹಲಿಗೆ ಕಳಿಸಿಕೊಡಲಾಗಿದೆ. ಅಲ್ಲಿಂದ ಮಾಹಿತಿ ದೊರೆತ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಅಧಿಕೃತವಾಗಿ ನೋಂದಣಿಯಾಗಿ ಅರ್ಜಿ ಸಲ್ಲಿಸಿದ ತಾಲೂಕಿನ ಒಟ್ಟು 94 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಜತೆಗೆ ಸುಮಾರು 25 ದೇವಸ್ಥಾನದ ಅಭಿವೃದ್ಧಿಗೂ ಶಾಸಕರ ಅನುದಾನದಿಂದ ಹಣ ನೀಡಲಾಗಿದೆ. ಈ ಸಾಲಿನ ರಾಜ್ಯದ ಬಜೆಟ್ ಪೂರಕವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯಾವುದೇ ತೊಡಕಿಲ್ಲ ಎಂದರು.
ತಲವಾಟ ಗ್ರಾಪಂ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷೆ ದೇವಕಿ, ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಭವ್ಯಾ ಕೃಷ್ಣಮೂರ್ತಿ, ಮಾಸ್ತಿಯಮ್ಮ ದೇವಸ್ಥಾನ ಧರ್ಮದರ್ಶಿ ಮಂಜುನಾಥ್, ಕಾಂಗ್ರೆಸ್ ಘಟಕದ ಅಧ್ಯಕ್ಷ ಬಂಗಾರಪ್ಪ, ಆಶ್ರಯ ಸಮಿತಿ ಸದಸ್ಯ ಎಚ್.ಎಸ್.ಸಾದಿಕ್, ರತ್ನಾಕರ್ ಜೈನ್ ಇತರರಿದ್ದರು.