

ನವದೆಹಲಿ: ರಷ್ಯಾದ ದಾಳಿಯಿಂದಾಗಿ ತೀವ್ರ ಭಯದ ವಾತಾವರಣ ಇರುವ ಯೂಕ್ರೇನ್ನಲ್ಲಿ ಸಿಲುಕಿಕೊಂಡಿರುವ ಹಲವರಿಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಉಳಿಯಲು ಸರಿಯಾದ ಸ್ಥಳ, ತಿನ್ನಲು ಸೂಕ್ತ ಆಹಾರ ಸಿಗದೆ ಸಂಕಟ ಹಾಗೂ ಭೀತಿಯಲ್ಲೇ ಒಂದೊಂದು ಕ್ಷಣವನ್ನೂ ಕಳೆಯುತ್ತಿದ್ದ ಸಂತ್ರಸ್ತರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಂತಾಗಿದೆ.
ಅದೇನೆಂದರೆ ಯೂಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯರಿಗೆ ಟ್ವೀಟ್ ಮೂಲಕ ತುರ್ತು ಸಂದೇಶವನ್ನು ರವಾನಿಸಿ, ಕೂಡಲೇ ಬೇರೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೆ.
ಖಾರ್ಕಿವ್ನಲ್ಲಿ ಇರುವವರು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಬೇಕು. ಖಾರ್ಕಿವ್ನಲ್ಲಿ ಇರುವವರು ಪಿಸೊಚಿನ್, ಬೆಜ್ಲ್ಯೂಡೊವ್ಕ ಮತ್ತು ಬಬಯ್ಗೆ ತಕ್ಷಣವೇ ಹೊರಟು ಯೂಕ್ರೇನಿಯನ್ ಸಮಯ 18:00ರ ಒಳಗೆ ಸೇರಿಕೊಳ್ಳಬೇಕು ಎಂದು ತಿಳಿಸಿದೆ.