

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಬುಧವಾರ ತಡರಾತ್ರಿ ದೆಹಲಿಯಲ್ಲಿ ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.
ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಮುಂದಿನ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಬಿಜೆಪಿ ಜತೆ ತೆಲುಗುದೇಶಂ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳೂ ಕೇಳಿಬರಲಾರಂಭಿಸಿವೆ.
ಅಮಿತ್ ಷಾ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ಈ ಸಂದರ್ಭದಲ್ಲಿ ಜೆ.ಪಿ. ನಡ್ಡಾ ಕೂಡ ಇದ್ದರು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ನಾಯ್ಡು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮರಳಿದರೆ ಅವರು ಎನ್ಡಿಎಯಲ್ಲಿನ ಎರಡನೇ ದೊಡ್ಡ ಪ್ರಾದೇಶಿಕ ನಾಯಕ ಎನಿಸಿಕೊಳ್ಳಲಿದ್ದಾರೆ. ಮೊದಲ ಸ್ಥಾನದಲ್ಲಿ ಇತ್ತೀಚೆಗಷ್ಟೇ ಎನ್ಡಿಎ ಜತೆ ಮೈತ್ರಿ ಮಾಡಿಕೊಂಡ ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಇದ್ದಾರೆ.
ನಾಯ್ಡು ಬಿಜೆಪಿಯೊಂದಿಗೆ ಕೈಜೋಡಿಸಲು ಉತ್ಸುಕರಾಗಿದ್ದಾರೆ ಮತ್ತು ವೈಎಸ್ಆರ್ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿನ ಮೈತ್ರಿ ಎನ್ಡಿಎಗೂ ಅನುಕೂಲಕರವಾಗಲಿದೆ ಎಂದು ಆಡಳಿತ ಪಕ್ಷದ ಕೆಲವರ ಅಭಿಪ್ರಾಯವಾಗಿದೆ ಎಂದು ನಾಯ್ಡು ಕಡೆಯ ಮೂಲಗಳಿಂದ ತಿಳಿದುಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಹಾಗೂ ಎನ್ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿರುವ ಹಿನ್ನೆಲೆಯಲ್ಲಿ ಕೂಡ ಈ ಭೇಟಿ ಮಹತ್ವದ್ದು ಎನಿಸಿಕೊಂಡಿದೆ.