

ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ(ಜ.20) ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಿದ್ದಾರೆ(Trump Oath Ceremony). ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಏತನ್ಮಧ್ಯೆ ಎಲಾನ್ ಮಸ್ಕ್ ಅವರ ಹ್ಯಾಂಡ್ ಗೆಸ್ಟರ್ ಸದ್ಯ(ನಾಜಿ ಸೆಲ್ಯೂಟ್) ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದ ಬೆನ್ನಲ್ಲೆ ಇಸ್ರೇಲ್ ಪ್ರಧಾನಿ(PM) ಬೆಂಜಮಿನ್ ನೆತನ್ಯಾಹು ಮಸ್ಕ್ ಪರ ಇದೀಗ ಬ್ಯಾಟ್ ಬೀಸಿದ್ದಾರೆ.
ಎಲಾನ್ ಮಸ್ಕ್ ಮಾಡಿರುವುದು 'ನಾಜಿ ಸೆಲ್ಯೂಟ್' ಅಲ್ಲ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ನೆತನ್ಯಾಹು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
''ಎಲಾನ್ ಮಸ್ಕ್ ಇಸ್ರೇಲ್‌ನ ಉತ್ತಮ ಸ್ನೇಹಿತ. ಕಳೆದ ವರ್ಷ(2024) ಅಕ್ಟೋಬರ್ 7ರಲ್ಲಿ ಹಮಾಸ್ ಭಯೋತ್ಪಾದಕರು ಯಹೂದಿ ಜನರ ವಿರುದ್ಧ ಅತ್ಯಂತ ಕೆಟ್ಟ ದೌರ್ಜನ್ಯ ಎಸಗಿದ್ದು, ಹತ್ಯಾಕಾಂಡದ ನಂತರ ಇಸ್ರೇಲ್‌ಗೆ ಮಸ್ಕ್ ಭೇಟಿ ನೀಡಿದರು. ಭಯೋತ್ಪಾದಕರು ಮತ್ತು ಆಡಳಿತಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಪದೇ ಪದೇ ಬಲವಾಗಿ ಬೆಂಬಲಿಸಿದ್ದಾರೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ,'' ಎಂದು ಹೇಳಿದ್ದಾರೆ.
ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವೇದಿಕೆ ಆಗಮಿಸಿದ ಎಲಾನ್ ಮಸ್ಕ್ ಇದು ಸಾಮಾನ್ಯ ವಿಷಯವಲ್ಲ. ಇದು ದೊಡ್ಡ ವಿಷಯವಾಗಿದೆ, ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳುತ್ತಾರೆ. ಜತೆಗೆ ಮಸ್ಕ್ ತನ್ನ ಎದೆಯ ಎಡಭಾಗವನ್ನು ತನ್ನ ಬಲಗೈಯಿಂದ ಟ್ಯಾಪ್ ಮಾಡಿ ನಂತರ ತನ್ನ ಅಂಗೈಯಿಂದ ತನ್ನ ತೋಳನ್ನು ಚಾಚುತ್ತಾರೆ. ಸದ್ಯ ಈ ವಿಡಿಯೋ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಎಲಾನ್ ಮಸ್ಕ್ ಅವರ ಹ್ಯಾಂಡ್ ಗೆಸ್ಟರ್ ಅನ್ನು ಜಾಲತಾಣದಲ್ಲಿ ಸಾಕಷ್ಟು ಟೀಕಿಸಲಾಗುತ್ತಿದೆ. ಇದನ್ನು 'ನಾಜಿ ಸೆಲ್ಯೂಟ್' ಎಂದು ಕರೆಯಲಾಗುತ್ತಿದೆ. ಅವರನ್ನು ಹಿಟ್ಲರ್ ಮತ್ತು ನಾಜಿಗೆ ಹೋಲಿಸಲಾಗುತ್ತಿದೆ. ವಾಸ್ತವವಾಗಿ, ನಾಜಿ ಸೆಲ್ಯೂಟ್ ಅನ್ನು ಹಿಟ್ಲರ್ ಸೆಲ್ಯೂಟ್ ಎಂದೂ ಕರೆಯಲಾಗುತ್ತದೆ. (ಏಜೆನ್ಸೀಸ್)