

ನವದೆಹಲಿ: ವಿವಾದಿತ ಮೂರು ಕೃಷಿ ಮಸೂದೆಗಳನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ಮಾಡದಂತೆ ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರೈತರಿಗೆ ಅನುಕೂಲವಾಗುವಂತಹ ಪರ್ಯಾಯ ಕಾನೂನುಗಳನ್ನು ರಚಿಸಿ ಈ ಕಾಯ್ದೆಯನ್ನು ನಿರರ್ಥಕಗೊಳಿಸುವಂತೆ ಕರೆ ನೀಡಿದ್ದಾರೆ.
ರಾಜ್ಯದ ಹಕ್ಕುಗಳ ಮೇಲೆ ಸವಾರಿ ಮಾಡುವ ಕೇಂದ್ರದ ಕಾನೂನುಗಳನ್ನು ನಿರರ್ಥಕಗೊಳಿಸಲು ಸಂವಿಧಾನದ 254(2) ವಿಧಿಯನ್ವಯ ಕಾನೂನುಗಳನ್ನು ರೂಪಿಸುವ ಸಾಧ್ಯತೆ ಪರಿಶೀಲಿಸುವಂತೆ ಸೋನಿಯಾ ಸೂಚಿಸಿದ್ದಾರೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ಬೆಂಕಿ, ಐವರ ಬಂಧನ: ಸಂಸತ್ತಿನಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಯವರ ಅಂಕಿತವನ್ನೂ ಪಡೆದು ಕಾನೂನಾಗಿ ಪರಿವರ್ತನೆಗೊಂಡಿರುವ ಮೂರು ಕೃಷಿ ಕಾಯ್ದೆ ವಿರುದ್ಧ ಸೋಮವಾರ ದೇಶದ ವಿವಿಧೆಡೆ ಆಕ್ರೋಶಪೂರ್ಣ ಪ್ರತಿಭಟನೆ ನಡೆಯಿತು. ನೂರಾರು ರೈತ ಸಂಘಟನೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು ಬೀದಿಗಿಳಿದು ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ಪಂಜಾಬ್ ಮತ್ತು ಹರ್ಯಾಣದಲ್ಲಿ ಪ್ರತಿಭಟನೆ ತೀವ್ರವಾಗಿತ್ತು.
ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆಕಾರರು ಟ್ರಾ್ಯಕ್ಟರ್ ಒಂದಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಈ ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ರಾಜಪಥ್ನ ಮಾನ್ ಸಿಂಗ್ ಕ್ರಾಸಿಂಗ್ನಲ್ಲಿ ಪ್ರಯಾಣಿಸುತ್ತಿದ್ದ ಜನರನ್ನು ಟ್ರಾ್ಯಕ್ಟರ್ನಿಂದ ಕೆಳಗಿಳಿಸಿ ಬೆಂಕಿ ಹಚ್ಚಲಾಯಿತು.ಈ ಕೃತ್ಯ ನಡೆಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ಲಸಿಕೆ ಕಥೆ ಎಲ್ಲಿಗೆ ಬಂತು? ಇಲ್ಲಿ ನೋಡಿ ತಿಳಿದುಕೊಳ್ಳಿ..
‘ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಇಂದಿನ ಘಟನೆಗೆ ನಾವೇ ಹೊಣೆಗಾರರು’ ಎಂದು ಪಂಜಾಬ್ ಯುವ ಕಾಂಗ್ರೆಸ್ ಅಧ್ಯಕ್ಷ ಬೃಂದರ್ ಧಿಲ್ಲಾನ್ ಟ್ವೀಟ್ ಮಾಡಿದ್ದಾರೆ. ಕಿಸಾನ್-ಮಜ್ದೂರ್ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಪಂಜಾಬ್ ರೈತರು ಅಮೃತಸರ-ದೆಹಲಿ ಮಾರ್ಗದ ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟಿಸಿದರು. ಕಳೆದ ಬುಧವಾರದಿಂದಲೂ ರೈಲು ತಡೆ ಚಳವಳಿ ನಡೆಯುತ್ತಿದೆ.
ಸೋಮವಾರ ಕ್ರಾಂತಿಕಾರಿ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ರ ಜನ್ಮ ದಿನ. ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಧರಣಿ ನಡೆಸಿದರು.
ಸಂಸತ್ತಿನ ಒಳಗೂ ಹೊರಗೂ ಕೃಷಿಕರ ದನಿಯನ್ನು ಅಡಗಿಸಲಾಗಿದೆ. ಈ ಕೃಷಿ ಕಾನೂನುಗಳು ರೈತರ ಮರಣ ಶಾಸನವಾಗಿದೆ. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ರೈತರ ಉತ್ಪಾದನಾ ವ್ಯಾಪಾರ, ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ.
ವಿವಾದಿತ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗುವ ಮುನ್ನವೇ ಅವನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ. ಮಸೂದೆ ರಚನೆಗೂ ಮುಂಚೆ ಕಳೆದ ಜೂನ್ನಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಗಳನ್ನು ಮಹಾರಾಷ್ಟ್ರ ಸರ್ಕಾರ ಆಗಸ್ಟ್ನಲ್ಲೇ ಜಾರಿ ಮಾಡಿತ್ತು ಎಂದು ತಿಳಿದುಬಂದಿದೆ. ಇದು ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟ ಮಹಾ ವಿಕಾಸ್ ಆಘಾಡಿಗೆ ಮುಜುಗರ ತಂದಿದೆ.
ಕಾಯ್ದೆ ವಿರುದ್ಧ ನಡೆಯುತ್ತಿರುವ ಆಂದೋಲನ ದೇಶದ ಭದ್ರತೆಗೆ ಅಪಾಯವೊಡ್ಡಬಹುದು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ಚಳವಳಿಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದೆ. ಪ್ರತಿಭಟನೆ ನಿರತ ರೈತರು ಐಎಸ್ಐ ಜಾಲಕ್ಕೆ ಸುಲಭವಾಗಿ ಬಲಿ ಬೀಳಬಹುದು ಎಂದು ಸಿಂಗ್ ಹೇಳಿದ್ದಾರೆ. ಈ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಅವರು ತಿಳಿಸಿದ್ದಾರೆ. ಈ ಮಧ್ಯೆ, ಕೇರಳದ ಕಾಂಗ್ರೆಸ್ ಸಂಸದ ಟಿ.ಎನ್.ಪ್ರತಾಪನ್ ಕೃಷಿಗೆ ಸಂಬಂಧಿಸಿದ 3 ಕಾಯ್ದೆಯನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ: ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿಗೆ ಪಾಕ್ ಸರ್ಕಾರದ ಒಲವು
ಇಂಡಿಯಾ ಗೇಟ್ ಬಳಿ ಪ್ರತಿಭಟನಾ ಕಾರರು ಬೆಂಕಿ ಹಚ್ಚಿದ ಟ್ರಾ್ಯಕ್ಟರ್ಗೆ ಈ ಮೊದಲು ಅಂಬಾಲಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಲಾಗಿದ್ದು ಸೆ.20ರಂದು ಅಂಬಾಲಾದಲ್ಲಿ ನಡೆದ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿದ್ದ ಟ್ರಾ್ಯಕ್ಟರ್ನ ಫೋಟೋ, ದೆಹಲಿಯಲ್ಲಿ ಬೆಂಕಿ ಹಚ್ಚಿದ ಫೋಟೋದಲ್ಲಿರುವ ಟ್ರ್ಯಾಕ್ಟರ್ ಒಂದೇ ರೀತಿ ಇದೆ. ಎರಡೂ ಟ್ರಾ್ಯಕ್ಟರ್ ‘ಆರ್ಆರ್ಕೆ 1163’ ನಂಬರ್ ಪ್ಲೇಟ್ ಹೊಂದಿವೆ.