

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳನ್ನು (ಎಚ್ಎಸ್ಆರ್ಪಿ) ಅಳವಡಿಸಲು ವಾಹನ ಮಾಲೀಕರ ನಿರಾಸಕ್ತಿ ಮುಂದುವರಿದಿದೆ. ಹಲವು ಬಾರಿ ಗಡುವು ವಿಧಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿದ ಎಲ್ಲ ವಾಹನಗಳಿಗೆ ಡೇಲಿವರಿ ಮಾಡುವ ಹೊತ್ತಲ್ಲೇ ಡೀಲರ್ಗಳು ಎಚ್ಎಸ್ಆರ್ಪಿ ಹಾಕಿಸಿ ಕೊಡುತ್ತಿದ್ದಾರೆ. ಇದಕ್ಕೂ ಮುಂಚೆ ಖರೀದಿ ಮಾಡಿದ ವಾಹನಗಳಿಗೆ ಈ ಬಗೆಯ ನಂಬರ್ ಪ್ಲೇಟ್ ಇರಲಿಲ್ಲ. ಹಾಗಾಗಿಯೇ, 2019 ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳನ್ನು (ಎಚ್ಎಸ್ಆರ್ಪಿ) ಅಳವಡಿಸಲು ಫೆಬ್ರವರಿ 17ರ ಗಡುವು ವಿಧಿಸಲಾಗಿದೆ.
ಸಾರಿಗೆ ಇಲಾಖೆ ಫೆಬ್ರವರಿ 17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಮೊದಲನೆ ಬಾರಿ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ ಬಾರಿ ಸಿಕ್ಕಿಬಿದ್ದರೆ 2000 ರೂ. ದಂಡ ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ರಾಜ್ಯದಲ್ಲಿ 1.70 ಕೋಟಿ ವಾಹನಗಳಿದ್ದರೂ, ಈ ಪೈಕಿ 10 ಲಕ್ಷ ವಾಹನಗಳಿಗಷ್ಟೇ ಎಚ್ಎಸ್ಆರ್ಪಿ ಹಾಕಿಸಲಾಗಿದೆ. ರಾಜ್ಯಾದ್ಯಂತ 4,000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ.
ವಾಹನಕ್ಕೆ ಒಮ್ಮೆ ಎಚ್ಎಸ್ಆರ್ಪಿ ಹಾಕಿಸಿದರೆ ಅದನ್ನು ಬದಲಿಸಲು, ತಿದ್ದಲು ಸಾಧ್ಯವಿಲ್ಲ. ಅಲ್ಲದೆ, ಈ ನಂಬರ್ ಪ್ಲೇಟ್ ನಕಲಿ ಮಾಡಲು ಆಗುವುದಿಲ್ಲ. ವಾಹನ ಕಳ್ಳತನವಾದರೆ, ಯಾವುದೇ ಅಪರಾಧ ಕೃತ್ಯದಲ್ಲಿ ಬಳಸಿದರೆ ಅದನ್ನು ಗುರುತಿಸುವುದು ಸುಲಭ. ಮಾತ್ರವಲ್ಲ, ವೈಯಕ್ತಿಕ ಭದ್ರತೆ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಎಚ್ಎಸ್ಆರ್ಪಿ ತುಂಬ ಮುಖ್ಯ. ಸರ್ಕಾರ ತರುವ ಪ್ರಮುಖ ನಿಯಮಗಳನ್ನು ಜನರು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ, ಈ ವಿಷಯದಲ್ಲಿ ಜನರ ನಿರಾಸಕ್ತಿಗೆ ಅವರನ್ನು ದೂರಿ ಪ್ರಯೋಜನವಿಲ್ಲ. ದಂಡದ ಭೀತಿ ತೋರಿಸಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕಾರಣ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ಗೆ ನೋಂದಣಿ ಮಾಡುವ ಪ್ರಕ್ರಿಯೆಯಲ್ಲೇ ತಾಂತ್ರಿಕ ತೊಡಕುಗಳು ಎದುರಾಗುತ್ತಿದ್ದು, ನೋಂದಣಿ ಸಲೀಸಾಗಿ ಆಗುತ್ತಿಲ್ಲ. ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ ಮತ್ತು ಎಸ್ಐಎಂಎಂ ವೆಬ್ಸೈಟ್ಗಳಲ್ಲಿ ಮಾತ್ರ ನೋಂದಣಿಗೆ ಅವಕಾಶವಿದೆ. ಈ ವೆಬ್ಸೈಟ್ಗಳಿಗೆ ದಟ್ಟಣೆ ಹೆಚ್ಚುತ್ತಿರುವುದರಿಂದ ಆರಂಭಿಕ ಹಂತದಲ್ಲೇ ನೋಂದಣಿ ಪ್ರಕ್ರಿಯೆ ವಿಫಲವಾಗುತ್ತಿದೆ. ಇಲ್ಲದಿದ್ದರೆ, ವಾಹನದ ವಿವರಗಳು ಭರ್ತಿ ಮಾಡಿ, ಸಲ್ಲಿಸುವ ವೇಳೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ.
ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ, ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಡೀಲರ್ ಗುರುತಿಸುವುದು. ಮನೆ/ಕಚೇರಿ ಹತ್ತಿರದ ಡೀಲರ್ಗಳನ್ನು ಆಯ್ಕೆ ಮಾಡಲು ಹೋದರೆ, ಅದು ತೆಗೆದುಕೊಳ್ಳುತ್ತಿಲ್ಲ. ಇನ್ನು ನಂಬರ್ ಪ್ಲೇಟ್ ಹಾಕಿಸಲು ತುಂಬ ದೂರ ಕ್ರಮಿಸುವವರಾರು, ಅದಕ್ಕೆ ಸಾಕಷ್ಟು ಸಮಯ, ಶ್ರಮ ತಗಲುತ್ತದೆ ಎಂದು ಜನರು ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ, ಗಡುವು ವಿಸ್ತರಿಸುವ ಜತೆಗೆ ನೋಂದಣಿ ಪ್ರಕ್ರಿಯೆಗಳಲ್ಲಿನ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ಜನರಿಗೆ ಈ ಬಗ್ಗೆ ಸೂಕ್ತ ಮಾಹಿತಿಯನ್ನು ಸಾರಿಗೆ ಇಲಾಖೆ ನೀಡಬೇಕು.