

ನವದೆಹಲಿ: ದೊಡ್ಡ ದೊಡ್ಡ ಮನೆಗಳು ಕೂಡ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಗುಡ್ಡಗಳೇ ಕುಸಿದು ಹೋಗುತ್ತವೆ. ಇನ್ನು ನದಿಗಳ ಭೋರ್ಗರೆತ ಕೇಳಿದರೆ ಸಾಕು ಎಂಥವರ ಎದೆಯಲ್ಲೂ ಒಮ್ಮೆ ನಡುಕು ಉಂಟಾಗುತ್ತದೆ. ಸೇತುವೆಗಳು ಕುಸಿದು ನೀರು ಪಾಲಾಗಿರುವುದನ್ನು ನೋಡಿದ್ದೇವೆ. ಪ್ರವಾಹ ಎಂದ ಕೂಡಲೇ ಇಡೀ ಊರಿಗೆ ಊರೇ ಖಾಲಿಯಾಗುತ್ತದೆ. ಸಾವಿನ ಕೇಕೆ ಹಾಕುವ ಪ್ರವಾಹಕ್ಕೆ ಯಾರೂ ದೊಡ್ಡವರಲ್ಲ. ಆದರೆ, ಈ ಒಂದು ಆನೆ ಮಾತ್ರ ಪ್ರವಾಹವನ್ನು ಮೀರಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಒಡಿಶಾ ರಾಜ್ಯದ ಜಾಜ್‌ಪುರ ಜಿಲ್ಲೆಯಲ್ಲಿರುವ ಬ್ರಹ್ಮಿಣಿ ನದಿಯಲ್ಲಿ ಈ ಘಟನೆ ನಡೆದಿದೆ. ಆನೆಯ ಹಿಂಡು ಧೆಂಕನಾಲ್ ಜಿಲ್ಲೆಯ ಕಪಿಲಾಶ್ ಅರಣ್ಯದಿಂದ ಜಾಜ್‌ಪುರ ಜಿಲ್ಲೆಯ ಸುಕಿಂದಾ ಪ್ರದೇಶಕ್ಕೆ ಆಹಾರ ಅರಸಿ ಬಂದಿದ್ದವು. ಹಿಂಡಿನ ಇತರ ಆನೆಗಳು ಹಿಂತಿರುಗಿದಾಗ, ಒಂದು ಆನೆಗೆ ಅವುಗಳನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ.
ನಿನ್ನೆ ಗೋಬರ್ಘಾಟಿ ಪ್ರದೇಶದಲ್ಲಿ ಆ ಒಂಟಿ ಆನೆ ಕಾಣಿಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಅದನ್ನು ಅರಣ್ಯ ಪ್ರದೇಶದತ್ತ ಚದುರಿಸಲು ಯತ್ನಿಸಿದ್ದಾರೆ. ಆದರೆ, ಗಾಬರಿಗೊಂಡ ಆನೆ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ, ಭಯದಿಂದ ಅಲ್ಲಿಯೇ ಸುತ್ತಾಡಿ ಮಂಗರಾಜಪುರ ಬಡಾವಣೆಯಲ್ಲಿ ರಾತ್ರಿ ಕಳೆಯಿತು. ಇತ್ತ ಆನೆಯ ಉಪಸ್ಥಿತಿಯನ್ನು ಕಂಡು ಸ್ಥಳೀಯರು ಕೂಡ ಭಯಭೀತರಾಗಿದ್ದರು.
ಇಂದು ಬೆಳಗ್ಗೆ ಬ್ರಹ್ಮಿಣಿ ನದಿಯನ್ನು ನಿರ್ಭಯವಾಗಿ ದಾಟುತ್ತಿದ್ದ ಆನೆಯನ್ನು ಕಂಡು ಸ್ಥಳೀಯರು ಬೆರಗಾದರು. ವಿವಿಧ ಪ್ರದೇಶಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ನೀರು ನದಿಗೆ ಸೇರಿದ್ದರಿಂದ ನೀರಿನ ಪ್ರವಾಹ ತೀವ್ರವಾಗಿತ್ತು. ಆದರೆ, ಆನೆ ಮಾತ್ರ ಪ್ರವಾಹವನ್ನು ಲೆಕ್ಕಿಸದೇ ಮತ್ತು ಯಾವುದೇ ಭಯವಿಲ್ಲದೇ ಗಾಂಭೀರ್ಯದಿಂದ ಮುಂದೆ ಸಾಗಿ ನದಿಯನ್ನು ಯಶಸ್ವಿಯಾಗಿ ದಾಟಿತು. ಬಳಿಕ ಕಪಿಲಾಶ್ ಅರಣ್ಯ ಪ್ರದೇಶವನ್ನು ಪ್ರವೇಶಿಸಿತು.
ಬ್ರಹ್ಮಣಿ ನದಿ ದಾಟುತ್ತಿರುವ ಆನೆಯನ್ನು ವೀಕ್ಷಿಸಲು ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಹೆಚ್ಚಿನವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಇತರರೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. (ಏಜೆನ್ಸೀಸ್)