ಬೆಂಗಳೂರು: ಬಿಗ್ಬಾಸ್ ಸೀಸನ್ 11 ಯಾವಾಗ ಶುರುವಾಗುತ್ತೆ? ಈ ಬಾರಿ ಆ್ಯಂಕರ್ ಬದಲಾಗ್ತಾರಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸೆ. 29ರಿಂದ ಬಿಗ್ಬಾಸ್ ಸೀಸನ್ 11 ಆರಂಭವಾಗಲಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸಮ್ಥಿಂಗ್ ಸ್ಪೆಷಲ್ ಸಹ ಇರಲಿದ್ದು, ಇದು ಹೊಸ ಅಧ್ಯಾಯ ಎಂದು ಹೇಳಿರುವುದರಿಂದ ಈ ಶೋ ಮೇಲೆ ಹೆಚ್ಚು ನಿರೀಕ್ಷೆ ಇದೆ.
ನಿನ್ನೆ ನಡೆದ ಗಿಚ್ಚಿ ಗಿಲಿಗಿಲಿ ಫಿನಾಲೆಯಲ್ಲಿ ಬಿಗ್ಬಾಸ್ ಪ್ರೋಮೋ ಪ್ರದರ್ಶನ ಮಾಡುವ ಮೂಲಕ ಬಿಗ್ಬಾಸ್ ಸೀಸನ್ 11 ಅನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್ಷಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ. ಈ ಶೋ ಮಾಮೂಲಿಯಂತೆ ಈ ಬಾರಿಯೂ ಕಲರ್ಸ್ ಕನ್ನಡದಲ್ಲಿ ಮೂಡಿ ಬರಲಿದೆ.
ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್ಬಾಸ್ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಸದ್ಯದ ಮಾಹಿತಿ ಪ್ರಕಾರ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಸೋಶಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ನಟ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯ ಜತೆ ಲವ್ ಬ್ರೇಕಪ್ ಮಾಡಿಕೊಂಡು ವರ್ಷಾ ಕಾವೇರಿ ಸುದ್ದಿಯಾಗಿದ್ದರು.
ನಟಿ ಪ್ರೇಮಾ ಅವರ ಹೆಸರು ಸಹ ಕೇಳಿಬರುತ್ತಿದೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ, ಬಿಗ್ ಬಾಸ್ ಸೀಸನ್ 11ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಹಾಸ್ಯನಟ ರಾಘವೇಂದ್ರ, ತುಕಾಲಿ ಸಂತೋಷ್ ಪತ್ನಿ ಮಾನಸ, ನಟಿ ಹಾಗೂ ಮಾಡೆಲ್ ಜ್ಯೋತಿ ರೈ, ನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಸೋಶಿಯಲ್ ಮೀಡಿಯಾ ಸ್ಟಾರ್ ನಾಗರಾಜ್ ಕುಡಪಲ್ಲಿ, ನಟಿ ಪ್ರಿಯಾ ಶಠಮರ್ಷಣ, ಕಾಮಿಡಿಯನ್ ಮುಕಳೆಪ್ಪ, ನಟಿ ಪ್ರಿಯಾ ಸವದಿ, ಕಾಮಿಡಿಯನ್ ಶಿವಪುತ್ರ, ಯುವ ರಾಜಕಾರಣಿ ನಿಶಾ ಯೋಗೇಶ್ವರ್, ರಾಜಕಾರಣಿ ಮೊಹಮ್ಮದ್ ನಲಪಾಡ್ ಹ್ಯಾರಿಸ್, ನಟ ತ್ರಿವಿಕ್ರಮ್, ಸುನಿಲ್ ರಾವ್, ಭವ್ಯ ಗೌಡ, ಮೋಕ್ಷಾ ಪೈ ಹಾಗೂ ರೀಲ್ಸ್ ರೇಷ್ಮಾ ಹೀಗೆ ಬಹುತೇಕರ ಹೆಸರುಗಳು ಕೇಳಿ ಬರ್ತಿವೆ. ಖ್ಯಾತ ಯೂಟ್ಯೂಬರ್ ಡಾ. ಬ್ರೋ ಹೆಸರು ಕೂಡ ಕೇಳಿಬಂದಿದೆ. ಆದರೆ, ಮೂರು ತಿಂಗಳ ಕಾಲ ಒಂದೇ ಕಡೆ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಡಾ. ಬ್ರೋ ಹೇಳಿದ್ದಾರೆ. ಒಂದು ವೇಳೆ ಅವರು ಬಂದರೂ ಕೂಡ ಅಚ್ಚರಿಪಡಬೇಕಿಲ್ಲ.
ಇನ್ನು ಮಾಧ್ಯಮ ಲೋಕದ ಆ್ಯಂಕರ್ಗಳಾದ ಸುಕನ್ಯ, ಜಯಪ್ರಕಾಶ್ ಶೆಟ್ಟಿ, ಅಜಿತ್ ಹನುಮಕ್ಕನವರ್, ಹರೀಶ್ ನಾಗರಾಜು ಹಾಗೂ ರಾಧಾ ಹೀರೇಗೌಡರ್ ಹೆಸರುಗಳು ಕೂಡ ಕೇಳಿಬರುತ್ತಿವೆ. ಆದರೆ, ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ತಿಳಿದುಕೊಳ್ಳಲು ಸೆ.29ರವರೆಗೆ ಕಾಯಬೇಕಿದೆ. ನಿಮ್ಮ ಪ್ರಕಾರ ಯಾರೆಲ್ಲ ಬಿಗ್ಬಾಸ್ ಮನೆಯನ್ನು ಪ್ರವೇಶಿಸಬಹುದು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.
ನಿಮ್ಮ ಅಂಗೈನಲ್ಲಿ ಈ ರೀತಿ ತ್ರಿಕೋನ ಚಿಹ್ನೆ ಇದೆಯಾ? ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…
ಮುಂದಿನ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡ್ತೀರಾ? ಕೊನೆಗೂ ಮೌನ ಮುರಿದ ಕೆ.ಎಲ್. ರಾಹುಲ್