

ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಹಲವು ರೈತರ ತೋಟಗಳಿಗೆ ನುಗ್ಗಿ ಹಾನಿ ಮಾಡಿವೆ. ಖಾಂಡ್ಯ ಗ್ರಾಮದ ಅನಂತಭಟ್ ಎಂಬುವರ ತೋಟಕ್ಕೆ ಬುಧವಾರ ರಾತ್ರಿ ಕಾಡಾನೆಯೊಂದು ದಾಳಿ ಮಾಡಿ ಕಾಫಿ ಗಿಡ, ಅಡಕೆ ಮರಗಳನ್ನು ಮುರಿದು ಹಾಳುಗೆಡವಿದೆ. ಅಕ್ಕಪಕ್ಕದ ತೋಟಗಳಿಗೂ ಸಣ್ಣಪುಟ್ಟ ಹಾನಿ ಉಂಟು ಮಾಡಿದೆ. ಕಳೆದ ವಾರವಷ್ಟೇ ಅನಂತಭಟ್ ಅವರ ತೋಟಕ್ಕೆ ನುಗ್ಗಿದ್ದ ಕಾಡಾನೆ ನೂರಾರು ಕಾಫಿ ಗಿಡ, ಅಡಕೆ ಮರಗಳನ್ನು ನಾಶ ಮಾಡಿತ್ತು.
ಖಾಂಡ್ಯ ಹೋಬಳಿಯ ಬಿದರೆ, ಉಜ್ಜಿನಿ, ಕಡಬಗೆರೆ, ಹುಯಿಗೆರೆ, ಕರಗಣೆ, ಸಂಗಮೇಶ್ವರಪೇಟೆ, ಹೊನ್ನೇಕೊಪ್ಪ, ಅಂಡವಾನೆ ಮುಂತಾದ ಕಡೆಗಳಲ್ಲಿ ಕಾಡಾನೆಗಳು ರೈತರ ತೋಟಕ್ಕೆ ಇತ್ತೀಚೆಗೆ ಹಲವು ದಿನಗಳಿಂದ ದಾಳಿ ಮಾಡುತ್ತಿದ್ದು ರೈತರು ಆತಂಕಕ್ಕೀಡಾಗಿದ್ದಾರೆ.