

ಚಾಮರಾಜನಗರ: ಜಮೀನಿನಲ್ಲಿ ಮೇಯಲು ಹೋಗಿದ್ದ ಹಸು ಮನೆಗೆ ಬಂದಿರಲಿಲ್ಲ. ಇದನ್ನು ಹುಡುಕಿಕೊಂಡು ಹೋದ ರೈತ ಕೂಡ ಹಿಂತಿರುಗಲಿಲ್ಲ. ಏನಾಯ್ತೆಂದು ಹುಡುಕಲು ಹೊರಟ ಕುಟುಂಬಸ್ಥರು ಮಾರ್ಗ ಮಧ್ಯೆ ಸಿಕ್ಕ ಶವ ಕಂಡು ದಂಗಾದರು!
ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯಕ್ಕೆ ಹೊಂದಿಕೊಂಡ ಹೊಂಗಲವಾಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು. ರೈತ ಗುರುಸ್ವಾಮಿ(55) ದುರಂತ ಅಂತ್ಯ ಕಂಡಿದ್ದಾರೆ.
ಆಗಿದ್ದೇನು?: ಗುರುಸ್ವಾಮಿಗೆ ಸೇರಿದ ಹಸು ಬುಧವಾರ ಜಮೀನಿನ ಕಡೆ ಮೇಯಲು ಹೋಗಿದ್ದು, ವಾಪಸ್ ಬಂದಿರಲಿಲ್ಲ. ಹಸು ಹುಡುಕಿಕೊಂಡು ಹೋಗುತ್ತಿದ್ದ ಗುರುಸ್ವಾಮಿ ಮೇಲೆ ಗ್ರಾಮದ ನಾಲೆ ರಸ್ತೆಯಲ್ಲಿ ದಿಢೀರ್ ಎದುರಾದ ಆನೆ ದಾಳಿ ಮಾಡಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದ್ಯಾವುದರ ಪರಿವೇ ಇಲ್ಲ ಕುಟುಂಬಸ್ಥರು ಗುರುಸ್ವಾಮಿ ಸಂಜೆಯಾದರೂ ಏಕೆ ಮನೆಗೆ ಬಂದಿಲ್ಲ ಎಂದು ಹುಡುಕಾಟ ಕೈಗೊಂಡಿದ್ದರು. ಮಾರ್ಗಮಧ್ಯೆ ಆನೆ ದಾಳಿಗೆ ಗುರುಸ್ವಾಮಿ ಬಲಿಯಾಗಿರುವುದು ಗೊತ್ತಾಗಿದೆ. ಸಮೀಪದಲ್ಲೇ ಬೀಡು ಬಿಟ್ಟಿದ್ದ ಆನೆ ಬೇರೆಡೆಗೆ ತೆರಳುವವರೆಗೂ ಕಾದ ಗ್ರಾಮಸ್ಥರು ಗುರುವಾರ ಬೆಳಗ್ಗೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.
ಘಟನೆ ನಡೆದ ಸ್ಥಳಕ್ಕೆ ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.