

ವಿಜಯಪುರ: ತಾಲೂಕಿನ ಅರಕೇರಿ ಬಳಿಯ ಕನ್ನಾಳ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿಯಲ್ಲಿ ಪೆಟ್ರೋಲ್ ಬಾಂಬ್, ಜೀವಂತ ಗುಂಡುಗಳು, ಮಚ್ಚು, ಲಾಂಗ್, ಟಿಪ್ಪರ್ ಲಾರಿ ಭಾರೀ ಸದ್ದು ಮಾಡಿದ್ದವು.
ಘಟನೆಯಲ್ಲಿ ಸಾಹುಕಾರನ ಕಾರು ಚಾಲಕ ಲಕ್ಷ್ಮಣ ದಿಂಡೋರೆಗೆ ಒಂದು ಗುಂಡು ತಗುಲಿತ್ತು. ಕಾಲು ಕೂಡ ತುಂಡಾಗಿತ್ತು. ತೀವ್ರ ರಕ್ತಸ್ರಾವವಾಗಿ ಲಕ್ಷ್ಮಣ(27) ಮೃತಪಟ್ಟಿದ್ದ. ಮಹಾದೇವ ಸಾಹುಕಾರನ ದೇಹಕ್ಕೆ ಗುಂಡುಗಳು ಹೊಕ್ಕಿದ್ದವು. ಮಹಾದೇವ ಸಾಹುಕಾರ ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಲಾಯಿತು. ಅಲ್ಲೇ ತೊಗರಿ ಗಿಡದಲ್ಲಿ ಅವಿತುಕುಳಿತಿದ್ದ 15-20 ಜನರ ಗ್ಯಾಂಗ್ ಮಹಾದೇವ ಸಾಹುಕಾರನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿತ್ತು. ಕೃತ್ಯಕ್ಕೆ ಪೆಟ್ರೋಲ್ ಬಾಂಬ್, ಮಚ್ಚು, ಲಾಂಗ್ ಅನ್ನೂ ಬಳಸಿದ್ದರು.
ಮಹದೇವ ಬೈರಗೊಂಡ ಸಾಹುಕಾರನ ದೇಹಕ್ಕೆ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆಯಲಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಬೆಳಗಾವಿಯ ಎಫ್ಎಸ್ಎಲ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೂವರು ಅಧಿಕಾರಿಗಳಿದ್ದ ತಂಡಕ್ಕೆ ಎಸ್ಪಿ ಅನುಪಮ್ ಅಗರವಾಲ್ ಸಾಥ್ ನೀಡಿದರು. ಸ್ಥಳದಲ್ಲಿ ಕೆಲವು ಜೀವಂತ ಗುಂಡು ಸಿಕ್ಕಿದ್ದು ಇನ್ನುಳಿದಂತೆ ಕೆಲ ಸಾಕ್ಷಿ ಕಲೆ ಹಾಕಲಾಯಿತು. ಒಟ್ಟು ಐದು ಬೈಕ್, ಟಿಪ್ಪರ್, ಮಚ್ಚು-ಲಾಂಗ್ಗಳು ಹಾಗೂ ಜೀವಂತ ಗುಂಡುಗಳನ್ನು ಜಫ್ತಿ ಮಾಡಲಾಯಿತು. ಅಲ್ಲಲ್ಲಿ ಅಡಗಿ ಕುಳಿತು ಸಂಚು ರೂಪಿಸಿದ ಕುರುಹು ಕೂಡ ಸಿಕ್ಕಿದೆ.
ವಿಜಯಪುರ ಮತ್ತು ಬಾಗಲಕೋಟೆಯ 1,500ಕ್ಕೂ ಅಧಿಕ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಕಲಬುರಗಿ ಮತ್ತು ವಿಜಯಪುರ ಭಾಗದಲ್ಲಿ ಹಳೇ ಗ್ಯಾಂಗ್ ಮತ್ತೆ ಸಕ್ರಿಯಗೊಂಡಿದೆ. ಹೀಗಾಗಿ ಹಳೇ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದರು.