ದೀಪಾವಳಿಗೇ ರಾಜ್ಯದಲ್ಲಿ ವಿದ್ಯುತ್​ ಕೊರತೆ?; ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್​ ಉತ್ಪಾದನೆ ಕುಸಿತ

Light Bulb
Published on

ರಾಯಚೂರು: ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗುವ ಭೀತಿ ಇದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಗಣನೀಯ ಇಳಿಕೆ ಆಗಿದ್ದು, ಬೇಡಿಕೆ ಸರಿದೂಗಿಸಲು ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.

ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಇರದಿದ್ದರೂ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಕುಸಿತವಾಗಿರುವ ಕಾರಣ ದೀಪಾವಳಿ ಸಂದರ್ಭ ವಿದ್ಯುತ್ ಕಡಿತ ಉಂಟು ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಂಟು ಘಟಕಗಳಲ್ಲಿ ಕೇವಲ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಒಟ್ಟು 1,720 ಮೆವಾ ಸಾಮರ್ಥ್ಯದಲ್ಲಿ ಕೇವಲ 274 ಮೆವಾ ಉತ್ಪಾದನೆ ಮಾಡಲಾಗುತ್ತಿದೆ.

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರು ಘಟಕಗಳಲ್ಲಿ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಒಟ್ಟು 1,700 ಮೆವಾ ಸಾಮರ್ಥ್ಯದಲ್ಲಿ 369 ಮೆವಾ ಉತ್ಪಾದನೆಯಾಗುತ್ತಿದೆ. 1,600 ಮೆವಾ ಸಾಮರ್ಥ್ಯದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡು ಘಟಕಗಳಲ್ಲಿ ಒಂದು ಘಟಕದಿಂದ 302 ಮೆವಾ ಉತ್ಪಾದಿಸಲಾಗುತ್ತಿದೆ.

ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ಒಟ್ಟು 1,006 ಮೆವಾ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಜಲಮೂಲದಿಂದ 654 ಮೆವಾ ಹಾಗೂ ಸೌರ ಮತ್ತು ಪವನ ಮೂಲದಿಂದ ಗರಿಷ್ಠ 5,700 ಮೆವಾವರೆಗೆ ವಿದ್ಯುತ್ ಲಭ್ಯವಾಗುತ್ತಿದೆ. ಕೇಂದ್ರ ಜಾಲದಿಂದ 2,500 ಮೆವಾ ದೊರೆಯುತ್ತಿದೆ.

ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಗೆ ಗರಿಷ್ಠ 10,500 ಮೆವಾ ಮೇಲ್ಪಟ್ಟಿದ್ದು, ದೀಪಾವಳಿ ಪ್ರಯುಕ್ತ ವಿದ್ಯುತ್ ಬಳಕೆ ಹೆಚ್ಚಳ ಸಾಧ್ಯತೆ ಇರುವುದರಿಂದ ಬೇಡಿಕೆಯಲ್ಲಿ ಏರಿಕೆಯಾಗಲಿದೆ. ಇದರಿಂದ ಬೇಡಿಕೆ ಸರಿದೂಗಿಸಲು ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡುವುದು ಅನಿವಾರ್ಯವಾಗಲಿದೆ.

ಕಲ್ಲಿದ್ದಲು ದಾಸ್ತಾನು ಕೊರತೆ

ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅಗತ್ಯವಾಗಿರುವ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗಿರುವ ಕಾರಣ ಘಟಕಗಳನ್ನು ಸ್ಥಗಿತಗೊಳಿಸುವಂತಾಗಿದೆ. ಆರ್​ಟಿಪಿಎಸ್​ನ 1 ಮತ್ತು 2 ಘಟಕಗಳನ್ನು ಕಲ್ಲಿದ್ದಲು ಸಂರಕ್ಷಣೆ ಕಾರಣಕ್ಕೆ ಸ್ಥಗಿತಗೊಳಿಸಲಾಗಿದ್ದರೆ, 6ನೇ ಘಟಕ ಮತ್ತು ಬಿಟಿಪಿಎಸ್​ನ 1ನೇ ಘಟಕವನ್ನು ಬೇಡಿಕೆ ಕಡಿಮೆ ಇದೆ ಎನ್ನುವ ನೆಪದಲ್ಲಿ ಸ್ಥಗಿತಗೊಳಿಸಲಾಗಿದೆ.

ಪ್ರಸ್ತುತ ಆರ್​ಟಿಪಿಎಸ್​ನಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್, ಬಿಟಿಪಿಎಸ್​ನಲ್ಲಿ 68 ಸಾವಿರ ಮೆಟ್ರಿಕ್ ಟನ್ ಹಾಗೂ ವೈಟಿಪಿಎಸ್​ನಲ್ಲಿ 1.30 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಲಭ್ಯವಿದೆ. ಕಲ್ಲಿದ್ದಲು ಗಣಿಗಳಿಂದ ನಿಗದಿಯಂತೆ ಸರಬರಾಜು ಆಗಬೇಕಾದ ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳಿಗೆ ಸರಬರಾಜು ಆಗದಿರುವುದರಿಂದ ದಾಸ್ತಾನು ಪ್ರಮಾಣದಲ್ಲಿ ಇಳಿಕೆಯುಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net