ಹೊಸ ವರ್ಷಕ್ಕೆ ಕರೆಂಟ್ ಅಗ್ಗ: ಯುನಿಟ್​ಗೆ 70 ಪೈಸೆಯಿಂದ 2 ರೂ.ವರೆಗೆ ವಿದ್ಯುತ್ ದರ ಕಡಿತ?

Electricity
Published on

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ಮುನ್ನವೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಸಿಹಿಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ದಪಡಿಸಿದೆ. ಪದೇಪದೆ ದರ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂಧನ ಇಲಾಖೆಯ ವಿರುದ್ಧ ಮಡುಗಟ್ಟಿರುವ ಆಕ್ರೋಶ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕದಿಂದ ಸರ್ಕಾರ ಎಚ್ಚೆತ್ತುಕೊಂಡಂತಿದೆ. ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದ್ದು, ಪ್ರತಿ ಯುನಿಟ್​ಗೆ 70 ಪೈಸೆ ಯಿಂದ 2 ರೂ.ವರೆಗೂ ಇಳಿಕೆಯಾಗಬಹುದೆಂದು ಅಂದಾಜು ಮಾಡಲಾಗಿದೆ.

ಪ್ರತಿವರ್ಷ ನಡೆ ಸುವ ವಾರ್ಷಿಕ ದರ ಪರಿಷ್ಕರಣೆಯಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದಿಂದ ಗ್ರಾಹಕರ ಮೇಲೆ ಹೊರೆ ಹೇರಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗಲು ಇಂಧನ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರಬರಾಜು ಕಂಪನಿಗಳಿಂದ ಕೆಇಆರ್​ಸಿಗೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಿ ದರಪಟ್ಟಿಯನ್ನು ಸಲ್ಲಿಸಲು ಸಚಿವ ವಿ. ಸುನೀಲ್​ಕುಮಾರ್ ಸೂಚನೆ ನೀಡಿದ್ದಾರೆ. ಈ ಪ್ರಸ್ತಾಪ ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರವಲ್ಲ, ಎಚ್​ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್​ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರು ಗ್ರಿಡ್ ತೊರೆಯುತ್ತಿದ್ದರು. ಹೀಗಾಗಿ ಎಚ್​ಟಿ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕಾಗಿ ಕ್ರಾಸ್ ಸಬ್ಸಿಡಿಯನ್ನು ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಕೆಯಾಗಿದೆ. ಪ್ರತ್ಯೇಕ ಶುಲ್ಕ ಪದ್ಧತಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

ಸಮಯಾಧಾರಿತ ಶುಲ್ಕ: ಎಚ್​ಟಿ ಗ್ರಾಹಕರಿಗೆ ಸಮಯಾಧಾರಿತ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್​ಗೆ ಈ ಮೊದಲು ವಿಧಿಸುತ್ತಿದ್ದ 6.60 ರೂ. ಬಳಕೆದಾರರ ಶುಲ್ಕ ಹೊಸ ಪ್ರಸ್ತಾಪದಿಂದ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು 75 ಪೈಸೆವರೆಗೆ ರಿಯಾಯಿತಿ ಸಿಗಬಹುದು.

ಈ ಬಾರಿ ವಿದ್ಯುತ್ ಶುಲ್ಕ ಪರಿಷ್ಕರಣೆ ಸಂದರ್ಭದಲ್ಲಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಪೂರ್ವ ತಯಾರಿ ನಡೆಸಲಾಗುತ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹೇರಿ ಗ್ರಾಹಕಸ್ನೇಹಿಯಾಗುವ ಮೂಲಕ ರಾಜ್ಯ ಸರ್ಕಾರ ಇನ್ನಷ್ಟು ಜನಪರವಾಗಲಿದೆ. ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ. | ವಿ. ಸುನಿಲ್​ಕುಮಾರ್ ಇಂಧನ ಸಚಿವ

ಮುಖ್ಯಾಂಶಗಳು

  • 50-200 ಯುನಿಟ್​ವರೆಗಿನ ಸ್ಲ್ಯಾಬ್ ವಿಲೀನ
  • ಆರಂಭಿಕ ದರ ಯುನಿಟ್​ಗೆ 3.60 ರೂ. ನಿರೀಕ್ಷೆ
  • ನಂತರದ ಯುನಿಟ್​ಗಳಿಗೆ 4.60 ರೂ. ಶುಲ್ಕ
  • 200 ಯುನಿಟ್​ಗಿಂತ ಹೆಚ್ಚಿನ ಬಳಕೆಗೆ 7 ರೂ. ದರ ಸಾಧ್ಯತೆ
  • ಕೈಗಾರಿಕೆಗಳಿಗೂ ಸೌಲಭ್ಯ

ಗ್ರಾಮೀಣರಿಗೆ ರಿಯಾಯಿತಿ: ಇಂಧನ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ರಿಯಾಯಿತಿ ನೀಡುವ ಕುರಿತಾಗಿಯೂ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್​ವರೆಗೆ ಲೈಫ್ ಲೈನ್ ಬಳಕೆಯ ಎಲ್ಟಿ 2 (ಎ1) ಹಾಗೂ ಎಲ್ಟಿ 2(ಎ2) ಗ್ರಾಹಕರಿಗೆ ಈಗ ಪ್ರತಿ ಯುನಿಟ್​ಗೆ ವಿಧಿಸುತ್ತಿದ್ದ 4.15 ರೂ ಹಾಗೂ 4.05 ರೂ. ಶುಲ್ಕವನ್ನು 3.6 ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ. 50ರಿಂದ 200 ಯುನಿಟ್ ವರೆಗಿನ ಬಳಕೆಗೆ ಈ ವರೆಗೆ ವಿಧಿಸುತ್ತಿದ್ದ ಎರಡು ಸ್ಲಾ್ಯಬ್​ಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಲಾಗಿದ್ದು ಸರಾಸರಿ 5.40 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್​ಗೆ ಸರಾಸರಿ 2 ರೂ.ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ.ದರವನ್ನು ಏಕೀಕೃತಗೊಳಿಸಿ 7 ರೂ.ಗೆ ನಿಗದಿಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net