ವಿದ್ಯುತ್ ಶಾಕ್ ತಗುಲಿ ಯುವತಿ ಸಾವು ಕೊಲೆ ಶಂಕೆ

Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮನೆಯಲ್ಲಿ ನೀರು ಕಾಯಿಸಲು ಹೀಟರ್ ಹಚ್ಚುವಾಗ ಕರೆಂಟ್ ಶಾಕ್ ತಗುಲಿ ವಿವಾಹಿತ ಯುವತಿ ಮೃತಪಟ್ಟ ಘಟನೆ ನಗರದ ಕೋಟನೂರದಲ್ಲಿ ನಡೆದಿದೆ. ಇದು ಅವಘಡದ ಸಾವಲ್ಲ. ಮುಖದ ಮೇಲೆ ಇನ್ನಿತರ ಕಡೆ ಗಾಯಗಳಿರುವುದರಿಂದ ಸಾವಿನ ಬಗ್ಗೆ ಬಲವಾದ ಶಂಕೆ ಇದೆ. ಕೊಲೆಯಾಗಿರಲುಬಹುದು ಎಂದು ಮೃತಳ ಪೋಷಕರು ದೂರಿದ್ದಾರೆ.
ಭಾಗ್ಯಶ್ರೀ ಶಂಕರಗೌಡ (೧೯) ಸಂಶಯಾಸ್ಪದವಾಗಿ ಮೃತಪಟ್ಟ ಯುವತಿ. ಮೂಲತಃ ಶಹಾಪುರದವರು.
ಈ ಮುಂಚೆ ಅಪ್ರಾಪ್ತ ವಯಸ್ಕಳಾಗಿದ್ದಾಗ ಭಾಗ್ಯಶ್ರೀ, ಶಂಕರಗೌಡ  ಮಹಾಂತಗೌಡ ಎಂಬಾತನ ಜತೆಗೆ ಹೋಗಿದ್ದಳು. ಈ ಕುರಿತು ಬಿಗುಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಆಗ ಬಾಲ ಮಂದಿರದಲ್ಲಿದ್ದ ಆಕೆ ವಯಸ್ಕಳಾದ ಬಳಿಕ ಪೋಷಕರೊಂದಿಗೆ ಬರಲು ಒಪ್ಪಿರಲಿಲ್ಲ.
ಈಚೆಗೆ ಶಂಕರಗೌಡ ಜತೆಗೆ ಕಲಬುರಗಿಯ ಕೋಟನೂರ ಮಠದ ಹಿಂಭಾಗದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಬುಧವಾರ ಶಂಕರಗೌಡ ಆಕೆಯ ಪೋಷಕರಾದ ಶಿವಲಿಂಗಪ್ಪ ಅವರಿಗೆ ಕರೆ ಮಾಡಿ ಕೆರೆಂಟ್ ಹೊಡೆದು ನಿಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ತಿಳಿಸಿದಾಗ ಎಲ್ಲರು ಕೂಡಿಕೊಂಡು ಹೋಗಿ ನೋಡಿದಾಗ ಗಾಯಗಳಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಮಗಳ ಸಾವಿನಲ್ಲಿ ಬಲವಾದ ಸಂಶಯವಿದೆ. ತನಿಖೆ ನಡೆಸಿ ಕಾರಣ ಪತ್ತೆ ಮಾಡುವಂತೆ ದೂರು ನೀಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net