

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸರ್ವೇ ಕಾರ್ಯ ನಡೆಯುತ್ತಿದೆ. 1,500ಕ್ಕಿಂತ ಹೆಚ್ಚು ಮತದಾರರು ಇರುವ ಬೂತ್‌ಗಳನ್ನು ವಿಭಜಿಸಿ ಹೊಸ ಮತಗಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮತಗಟ್ಟೆ ಇದ್ದ ಶಾಲೆಗಳು ಮುಚ್ಚಿ ಹೋದಲ್ಲಿ ಅಂತಹ ಮತಗಟ್ಟೆಗಳನ್ನು ಜನಾಭಿಪ್ರಾಯ ಪಡೆದು ಬೇರೆಡೆಗೆ ಸ್ಥಳಾಂತರ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.
ಮತದಾನ ಪಟ್ಟಿ ಪರಿಷ್ಕರಣೆ ಸಂಬಂಧ ಮನೆ ಮನೆ ಸರ್ವೇ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಸರ್ವೇ ವೇಳೆ ಯಾವುದಾದರೂ ಮತಗಟ್ಟೆ ವ್ಯಾಪ್ತಿಗೆ ಹೊಸ ಬಡಾವಣೆಗಳು ಸೇರ್ಪಡೆಗೊಂಡಿದೆಯಾ, ಮತಗಟ್ಟೆ ವ್ಯಾಪ್ತಿಯಲ್ಲಿ ಹೊಸ ಮನೆಗಳು ಬಂದಿದೆಯಾ, ಮರಣ ಹೊಂದಿದವರನ್ನು ಮತದಾನ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.
ಹಿರಿಯ ಅಧಿಕಾರಿಗಳು ಸೇರಿದಂತೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್‌ಗಳು, ಬಿಎಲ್‌ಒಗಳನ್ನು ಒಳಗೊಂಡಂತೆ ಮನೆ ಮನೆ ಸರ್ವೇ ನಡೆಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದರ ಜತೆಗೆ ಒಂದೇ ಕುಟುಂಬದವರು ಬೇರೆ ಬೇರೆ ಬೂತ್‌ಗಳ ಮತದಾನ ಪಟ್ಟಿಯಲ್ಲಿದ್ದರೆ ಅಂತಹವರನ್ನು ಒಂದೇ ಮತಗಟ್ಟೆ ವ್ಯಾಪ್ತಿಗೆ ತರಲಾಗುವುದು. ಈ ಸಂದರ್ಭದಲ್ಲಿ ತಿದ್ದುಪಡಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಮತದಾನ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿದ್ದರೆ, ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಸ್ಥಳಾಂತರವಾಗಬೇಕಾದರೆ 7 ದಿನಗಳ ಅವಧಿಯಲ್ಲಿ ಸ್ಥಳೀಯ ಬಿಎಲ್‌ಓಗಳ ಸಹಾಯ ಪಡೆದು ಅರ್ಜಿ ಹಾಕಬಹುದು. ಸೆಪ್ಟೆಂಬರ್ 8 ರಿಂದ ಜಿಲ್ಲೆಗೆ ನೀಡಿದ ಇವಿಎಂ ಯಂತ್ರಗಳ ಪರಿಶೀಲನೆ ಹೈದರಾಬಾದ್‌ನಿಂದ ಆಗಮಿಸುವ ಇಂಜಿನಿಯರ್‌ಗಳ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.