ಚುನಾವಣಾ ಬಾಂಡ್​ಗಳಿಗೆ ಬ್ರೇಕ್​ ಹಾಕಿದ ಸುಪ್ರೀಂಕೋರ್ಟ್​! ಅಸಂವಿಧಾನಿಕ ಎಂದು ತೀರ್ಪು

Supreme Court
Published on

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್​ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಇಂದು (ಫೆ.15) ಮಹತ್ವದ ತೀರ್ಪು ಪ್ರಕಟಿಸಿದೆ. ಚುನಾವಣಾ ಬಾಂಡ್​ ಯೋಜನೆಯು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕವಾಗಿದೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

ಈ ಚುನಾವಣಾ ಬಾಂಡ್‌ಗಳ ಯೋಜನೆಯು ಅಸಾಂವಿಧಾನಿಕ, ಅನಿಯಂತ್ರಿತವಾಗಿದೆ ಮತ್ತು ರಾಜಕೀಯ ಪಕ್ಷಗಳು ಹಾಗೂ ದಾನಿಗಳ ನಡುವೆ ಕ್ವಿಡ್ ಪ್ರೊ ಕ್ವೊ ವ್ಯವಸ್ಥೆಗೆ ಕಾರಣವಾಗಬಹುದು ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದರು.

ಕಪ್ಪುಹಣದ ವಿರುದ್ಧದ ಹೋರಾಟ ಮತ್ತು ಬಾಂಡ್​ ನೀಡುವ ದಾನಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶವು ಈ ಯೋಜನೆಯನ್ನು ಸಮರ್ಥಿಸಿಕೊಳ್ಳಲಾಗದು. ಚುನಾವಣಾ ಬಾಂಡ್​ಗಳಿಂದ ಕಪ್ಪುಹಣ ನಿಗ್ರಹವೇ ಅಸಾಧ್ಯವಾಗಿದೆ. ಈ ಯೋಜನೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದ ನ್ಯಾಯಾಲಯ, ಮತದಾರರು ತಮ್ಮ ಮತ ಚಲಾಯಿಸಲು ಅಗತ್ಯವಾದ ಮಾಹಿತಿಯ ಹಕ್ಕನ್ನು ಹೊಂದಿದ್ದಾರೆ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಒತ್ತಿಹೇಳಿತು.

2024ರ ಮಾರ್ಚ್ 13 ರೊಳಗೆ ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿಗಳ ವಿವರಗಳನ್ನು ಪ್ರಕಟಿಸಬೇಕು ಎಂದು ಪೀಠ ಸೂಚಿಸಿದೆ. ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2019ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಸಲ್ಲಿಸಲು ತಿಳಿಸಿದೆ. ಇದರ ಜತೆಗೆ ಚುನಾವಣಾ ಬಾಂಡ್​ಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್​ಗಳಿಗೆ ಸೂಚನೆ ನೀಡಿದೆ.

ಏನಿದು ಚುನಾವಣಾ ಬಾಂಡ್​? ಈ ಯೋಜನೆಯನ್ನು 2018ರ ಜನವರಿಯಲ್ಲಿ ಆರಂಭಿಸಲಾಯಿತು. ಈ ಚುನಾವಣಾ ಬಾಂಡ್​ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಕ್ರಮವಾಗಿದೆ. ಈ ಬಾಂಡ್​ಗಳನ್ನು​ ಸಾಮಾನ್ಯ ಜನರು ಅಥವಾ ಕಾರ್ಪೊರೇಟ್​ ಸಂಸ್ಥೆಗಳು ಬ್ಯಾಂಕ್​ಗಳಲ್ಲಿ ಖರೀದಿ ಮಾಡಿ, ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಇದನ್ನು ಪಕ್ಷಗಳು ನಿಧಿಯನ್ನಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಬಾಂಡ್​ ಖರೀದಿಸಿದ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ಬಾಂಡ್​ ಪಡೆದ ಪಕ್ಷದ ಹೆಸರಾಗಲಿ ಬಹಿರಂಗವಾಗುವುದಿಲ್ಲ. ಬದಲಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net