ಶಿಕ್ಷಕರ ಓಲೈಕೆಗೆ ಆದೇಶ ಬದಲು; ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಸರ್ಕಾರಕ್ಕೆ ಚುನಾವಣೆಯೇ ಮುಖ್ಯ

WhatsApp-Image-2024-05-19-at-10.53.44-PM
Published on

| ಕೆ.ಎನ್.ರಾಘವೇಂದ್ರ, ಮಂಡ್ಯ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಿಕ್ಷಕ ಮತದಾರರನ್ನು ಓಲೈಸಿಕೊಳ್ಳಲು ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಡೋಲಾಯಮಾನ ಸ್ಥಿತಿಗೆ ತಂದಿದೆ. ಎಸ್ಸೆಸ್ಸೆಲ್ಸಿ ಅನುರ್ತಿ¤ಣರಾದವರಿಗೆ ನಡೆಸಬೇಕೆಂದು ತೀರ್ವನಿಸಿದ್ದ ವಿಶೇಷ ಪರಿಹಾರ ಬೋಧನೆ ತರಗತಿಯನ್ನು ಮುಂದೂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆಯಾಗಿದೆ. ಅದರಲ್ಲಿಯೂ ಕೆಲ ಜಿಲ್ಲೆಗಳ ಸಾಧನೆ ನೋಡಿದರೆ ಅಲ್ಲಿನ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಆತಂಕ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ 2ನೇ ಪರೀಕ್ಷೆಯಲ್ಲಾದರೂ ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವಂತೆ ಮಾಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ವೇಳಾಪಟ್ಟಿಯೂ ನೀಡಲಾಗಿತ್ತು. ಇದಕ್ಕೆ ತಕ್ಕಂತೆ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನೂ ರೂಪಿಸಿಕೊಳ್ಳಲಾಗಿತ್ತು. ಆದರೆ ಮೇ.17ರಂದು ಆದೇಶ ಹೊರಡಿಸಿದ ಪ್ರೌಢಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು, ವಿಶೇಷ ಪರಿಹಾರ ಬೋಧನೆಯನ್ನು ಮುಂದೂಡಿದ್ದಾರೆ. ಮಾತ್ರವಲ್ಲದೆ ಎಸ್ಸೆಸ್ಸೆಲ್ಸಿ 2ನೇ ಪರೀಕ್ಷೆ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದಾರೆ.

ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದ ಫಲಿತಾಂಶ ತೀವ್ರ ಇಳಿಮುಖವಾಗಿದೆ. 2019-20ರಲ್ಲಿ ಶೇ.71.80, 2020-21ರಲ್ಲಿ ಶೇ.99.99, 2021-22ರಲ್ಲಿ ಶೇ.85.13, 2022-23ರಲ್ಲಿ ಶೇ.83.89 ಹಾಗೂ 2023-24ರಲ್ಲಿ ಶೇ.73.40 ಫಲಿತಾಂಶ ಬಂದಿದೆ. ಇನ್ನು ಒಟ್ಟಾರೆ ಫಲಿತಾಂಶವನ್ನು ನೋಡಿದರೆ ಬಾಲಕರ ಸಾಧನೆ ತೀರಾ ಕಳಪೆಯಾಗಿದೆ. 2021-22ರಲ್ಲಿ ಶೇ.80.62 ಇದ್ದ ಬಾಲಕರ ಫಲಿತಾಂಶ ಪ್ರಮಾಣ 2022-23ರಲ್ಲಿ ಶೇ.80.08, 2023-24ರಲ್ಲಿ ಶೇ.65.90ಕ್ಕಿಳಿದಿದೆ. ಬಾಲಕಿಯರು ಒಟ್ಟಾರೆ ಫಲಿತಾಂಶದಲ್ಲಿ ಮುಂದಿದ್ದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಇದಲ್ಲದೆ ನಗರ ಹಾಗೂ ಗ್ರಾಮೀಣ ವಿಭಾಗದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಜಿಲ್ಲಾವಾರು ಅಂಕಿ ಅಂಶ ಗಮನಿಸಿದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾಯ ಜಿಲ್ಲೆಗಳಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಭೆಗಳನ್ನು ಆಯೋಜಿಸಿ ಚರ್ಚೆ ಕೂಡ ಮಾಡಲಾಗಿದೆ. ಅಂತೆಯೇ ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಹಾಗೂ ಸಿ, ಸಿ+ ಪಡೆದ ವಿದ್ಯಾರ್ಥಿಗಳನ್ನು ಎರಡನೇ ಪರೀಕ್ಷೆಗೆ ಸಜ್ಜುಗೊಳಿಸಲು ಪರಿಹಾರ ಬೋಧನೆ ತರಗತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಮೇ.15ರಿಂದ ಜೂ.5ರವರೆಗೆ ಶಾಲೆಯಲ್ಲಿ ತರಗತಿ ಮಾಡಬೇಕು. ಬಿಸಿಯೂಟವನ್ನು ಮುಂದುವರಿಸುವಂತೆಯೂ ತಿಳಿಸಲಾಗಿತ್ತು. ಆದರೆ ಈ ಆದೇಶ ಇದ್ದಕ್ಕಿದ್ದಂತೆಯೇ ಬದಲಾಗಿದೆ.

ರಾಜಕೀಯವೇ ಮುಖ್ಯ?: ರಾಜ್ಯಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಎಂಎಲ್​ಸಿ ಚುನಾವಣೆಯೇ ಮುಖ್ಯ ಎನ್ನಿಸಿದೆ. ಕಾರಣ ಈ ಚುನಾವಣೆಯಲ್ಲಿ ಪ್ರೌಢಶಾಲಾ ಶಿಕ್ಷಕರೇ ಹೆಚ್ಚು ಮತದಾರರಾಗಿದ್ದಾರೆ. ಪರಿಹಾರ ಬೋಧನೆ ಕಾರಣಕ್ಕೆ ರಜೆ ಅವಧಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಓಲೈಸಿಕೊಳ್ಳಲು ಆದೇಶವನ್ನು ಮುಂದೂಡಿದೆ ಎನ್ನುವ ಮಾತುಗಳಿವೆ. ಇನ್ನು ಈ ಆದೇಶ ರದ್ದು ಮಾಡಿದ್ದೇ ತಮ್ಮ ಒತ್ತಡದಿಂದಾಗಿ ಎಂದು ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಂಡು ಮತಬೇಟೆಯಾಡುತ್ತಿರುವುದು ವಿಪರ್ಯಾಸ.

ಪರಿಷ್ಕೃತ ವೇಳಾಪಟ್ಟಿ

ಜೂ.7ರಿಂದ ಎರಡನೇ ಪರೀಕ್ಷೆ ನಡೆಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಹೊರಡಿಸಿತ್ತು. ಆದರೀಗ ಆದೇಶ ಬದಲಾಗುತ್ತಿದ್ದಂತೆ ವೇಳಾಪಟ್ಟಿಯೂ ಪರಿಷ್ಕೃತಗೊಂಡಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ನೋಡುವುದಾದರೆ ವೇಳಾಪಟ್ಟಿ ಮುಂದೂಡಿರುವುದು ಉತ್ತಮ ಎನಿಸುತ್ತದೆ. ಆದರೆ ಪರಿಹಾರ ಬೋಧನಾ ತರಗತಿಯ ಅವಧಿಯನ್ನು ಮುಂದಕ್ಕೆ ಹಾಕಿರುವುದು ಸರಿಯಲ್ಲ ಎನ್ನುವ ಮಾತುಗಳಿವೆ. ಮೇ 29ರಿಂದ ಜೂ.13ರವರೆಗೆ ಪರಿಹಾರ ಬೋಧನೆ ನಡೆಯಲಿದೆ. ಇನ್ನು ಹೊಸ ಆದೇಶದಂತೆ ನೀಡಿರುವ ದಿನಾಂಕದಲ್ಲಿ ಶಾಲೆಯ ಆರಂಭವಾಗಲಿದೆ. ಇದೇ ಅವಧಿಯಲ್ಲಿ ಪರಿಹಾರ ಬೋಧನೆ ಮಾಡಿದರೆ ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆ ಕಾಡದೇ ಇರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net