ಮೇಲ್ಮನೆ ಮೇಲುಗೈಗೆ ಕದನ; ವಿಧಾನ ಪರಿಷತ್​ನ 25 ಸ್ಥಾನಕ್ಕೆ ಡಿ.10ರಂದು ಮತದಾನ

Vidhana Soudha vvani
Published on

ಬೆಂಗಳೂರು: ಉಪಸಮರದ ಜಿದ್ದಾಜಿದ್ದಿ ಮುಗಿಯುತ್ತಿದ್ದಂತೆಯೇ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಡಿ.10ರಂದು ಮತದಾನ ನಡೆಯಲಿದ್ದು, ಮೂರು ಪ್ರಮುಖ ಪಕ್ಷಗಳಲ್ಲಿ ಬಿರುಸಿನ ತಾಲೀಮು ಶುರುವಾಗಿದೆ. ಸರ್ಕಾರದ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೇಲ್ಮನೆಯಲ್ಲಿ ಬಲ ಹೆಚ್ಚಿಸಿ ಕೊಳ್ಳಲು ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಣ ತೊಟ್ಟಿದ್ದು, ದ್ವೈವಾರ್ಷಿಕ ಅವಧಿಯ 25 ಕ್ಷೇತ್ರಗಳ ಚುನಾವಣಾ ಕದನ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಲಕ್ಷಣಗಳಿವೆ. ಒಟ್ಟು 20 ಸ್ಥಳೀಯ ಸಂಸ್ಥೆಗಳ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯ ಲಿದ್ದು, ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಿರುವ ಎಲ್ಲ ಕಾರ್ಯತಂತ್ರ ರೂಪಿಸಲಾರಂಭಿಸಿವೆ. ಸದ್ಯಕ್ಕೆ ಸರ್ಕಾರದ ಜುಟ್ಟು ಪ್ರತಿಪಕ್ಷಗಳ ಕೈಯ್ಯಲ್ಲಿದೆ. ಆದರೆ ವಿಧಾನ ಪರಿಷತ್​ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮತ್ತೆ ಮೈತ್ರಿ ಕುದುರಿಸಿಕೊಂಡಿರುವುದು ಪ್ರತಿಪಕ್ಷ ಕಾಂಗ್ರೆಸ್​ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸಭಾಪತಿ ಸ್ಥಾನದಲ್ಲಿ ಜೆಡಿಎಸ್​ನ ಬಸವರಾಜ ಹೊರಟ್ಟಿ ಅವರನ್ನು ಪ್ರತಿಷ್ಠಾಪಿಸಿ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಂಡಿದ್ದು, ಆ ಮೂಲಕ ಪ್ರಮುಖ ಮಸೂದೆ, ನೀತಿ-ನಿರ್ಧಾರಗಳು ಪಾಸ್ ಆಗುವಂತೆ ನೋಡಿಕೊಂಡಿದೆ.

ಮೈತ್ರಿಗೆ ಮುನ್ನ ಮುಖಭಂಗ: ಜೆಡಿಎಸ್ ಜತೆಗಿನ ಮೈತ್ರಿಗೆ ಮುನ್ನ ಭೂಸುಧಾರಣೆ, ಎಪಿಎಂಸಿ, ಕಾರ್ವಿುಕ ಕಾಯ್ದೆಗಳಿಗೆ ತಿದ್ದುಪಡಿ ಮಸೂದೆಗಳು ಮೇಲ್ಮನೆಯಲ್ಲಿ ತಿರಸ್ಕೃತಗೊಂಡು ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿತ್ತು. ಹೀಗಾಗಿ ಕಾಂಗ್ರೆಸ್ ಮಣಿಸಲೆಂದೇ ಸಭಾಪತಿ ಸ್ಥಾನ ತ್ಯಾಗದ ಮೂಲಕ ಜೆಡಿಎಸ್ ಜತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ. ಆದರೂ ವಿಷಯಾಧಾರಿತವಾಗಿ ಬೆಂಬಲ ಪಡೆಯುತ್ತಿರುವ ಕಾರಣ ಆಗಾಗ್ಗೆ ಸಂದಿಗ್ಧ ಸ್ಥಿತಿಗೆ ಸಿಲುಕುತ್ತಿದೆ.

ಬಿಜೆಪಿ ಯೋಚನೆ: ದಾಕ್ಷಿಣ್ಯಕ್ಕೆ ಕಟ್ಟುಬಿದ್ದ ಮೈತ್ರಿಗಿಂತ ಸ್ವಾವಲಂಬನೆ ಸಾಧಿಸಲು ಬಿಜೆಪಿ ಗಂಭೀರವಾಗಿ ಯೋಚಿಸಿದ್ದು, ಪ್ರಬಲ ಅಭ್ಯರ್ಥಿಗಳ ಕೊರತೆಯಿರುವ ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್​ನವರಿಗೆ ಗಾಳ ಹಾಕಿದೆ. ಈಗಾಗಲೇ ಜೆಡಿಎಸ್​ನ ಸಂದೇಶ ನಾಗರಾಜ್, ಸಿ.ಆರ್. ಮನೋಹರ್, ಕೊಪ್ಪಳ-ರಾಯಚೂರು ಜಿಲ್ಲೆಯ ಹಿಂದುಳಿದ ವರ್ಗದ ಪ್ರಭಾವಿ ಮುಖಂಡ ಈ. ಆಂಜನೇಯ ಅವರನ್ನು ಸೆಳೆದಿದೆ. ಅಲ್ಲದೆ, ದ್ವಿಸದಸ್ಯತ್ವ ಹೊಂದಿರುವ ಐದು ಸ್ಥಳೀಯ ಸಂಸ್ಥೆಗಳ ಪೈಕಿ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸುವ ಚಿಂತನೆಯಲ್ಲಿದೆ. ತನ್ಮೂಲಕ ಮೇಲ್ಮನೆಯಲ್ಲಿ ನಿಚ್ಚಳ ಬಹುಮತಕ್ಕೆ ಬೇಕಾದಷ್ಟು ಸದಸ್ಯ ಬಲ ಹೊಂದುವ ಕಾರ್ಯತಂತ್ರ ಹೆಣೆಯಲಾರಂಭಿಸಿದೆ.

ಕಾಂಗ್ರೆಸ್ ಲೆಕ್ಕಾಚಾರ: ಜೆಡಿಎಸ್ ಸಂಗ ತೊರೆದ ಬಳಿಕ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ ಕುಂದಿದ್ದು, ಮತ್ತೆ ಹಿಡಿತ ಸಾಧಿಸುವ ಉದ್ದೇಶದಿಂದ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದಕ್ಕೆ ತಂತ್ರ ಮಾಡಿದೆ. ಸ್ಥಳೀಯ ಸಂಸ್ಥೆಗಳು ಕೈ ಬಾಹುಳ್ಯದ ಕ್ಷೇತ್ರಗಳಾಗಿರುವ ಕಾರಣ ಅದಕ್ಕೆ ತಕ್ಕುದಾದ ತಂತ್ರಗಾರಿಕೆ ಹೆಣೆದು, ಮೇಲ್ಮನೆಯಲ್ಲಿ ಪ್ರತಿ ಹೆಜ್ಜೆಗೂ ಸರ್ಕಾರಕ್ಕೆ ಅಗ್ನಿಪರೀಕ್ಷೆ ಒಡ್ಡುವ ಲೆಕ್ಕಾಚಾರದಲ್ಲಿದೆ.

ಜೆಡಿಎಸ್ ಹವಣಿಕೆ: ಕಿಂಗ್ ಮೇಕರ್ ಪಟ್ಟ ಭದ್ರವಾಗಿಟ್ಟುಕೊಳ್ಳುವುದು ಜೆಡಿಎಸ್ ಹವಣಿಕೆಯಾಗಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ತಮ್ಮ ಹಂಗಿನಲ್ಲಿರಬೇಕು ಎಂಬ ಯೋಚನೆಯಲ್ಲಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕಿಂತ ನಿರ್ಣಾಯಕ ಸಂಖ್ಯಾಬಲ ಹೊಂದುವತ್ತ ಚಿತ್ತ ಹರಿಸಿದೆ.

ಅವಕಾಶ ವಂಚಿತರು: ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ವಿಧಾನ ಪರಿಷತ್ ಸದಸ್ಯರನ್ನು ಆರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಸದ್ಯದ ಲೆಕ್ಕಾಚಾರದಂತೆ ಬಿಬಿಎಂಪಿ 198, ತಾಲೂಕು ಪಂಚಾಯಿತಿ- 3,285 ಹಾಗೂ ಜಿಲ್ಲಾ ಪಂಚಾಯಿತಿ-1,191 ಸದಸ್ಯರ ಅವಧಿ ಮುಗಿದಿದ್ದು, ಮತ ಚಲಾವಣೆ ಹಕ್ಕು ಕಳೆದುಕೊಂಡಿದ್ದಾರೆ.

ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯತ್ವದ ಅವಧಿ ಮುಗಿದಿದ್ದರೆ ಅವರಿಗೆ ಮತದಾನದ ಹಕ್ಕು ಇರುವುದಿಲ್ಲ. ಮತದಾನಕ್ಕೆ ಅರ್ಹ ಸದಸ್ಯರ ಕರಡು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಿದ್ದು, ನಂತರವಷ್ಟೇ ಮತದಾರರ ನಿಖರ ಸಂಖ್ಯೆ ಗೊತ್ತಾಗಲಿದೆ.

| ಮನೋಜ್​ಕುಮಾರ್ ಮೀನಾ ಮುಖ್ಯ ಚುನಾವಣಾಧಿಕಾರಿ

ಸದಸ್ಯರ ಬಲಾಬಲ: ವಿಧಾನ ಪರಿಷತ್ ಒಟ್ಟು ಸದಸ್ಯರ ಸಂಖ್ಯೆ 75. ಈ ಪೈಕಿ ಬಿಜೆಪಿ-32, ಕಾಂಗ್ರೆಸ್-29, ಜೆಡಿಎಸ್- 12, ಪಕ್ಷೇತರ ಹಾಗೂ ಸಭಾಪತಿ ತಲಾ 1 ನಿವೃತ್ತಿಯಾಗಲಿರುವ ಒಟ್ಟು ಸದಸ್ಯರ ಸಂಖ್ಯೆ 25. ಇದರಲ್ಲಿ ಕಾಂಗ್ರೆಸ್- 13, ಬಿಜೆಪಿ -6, ಜೆಡಿಎಸ್-5, ಪಕ್ಷೇತರ-1

ಎಲ್ಲೆಲ್ಲಿ ಚುನಾವಣೆ?

  • ದ್ವಿಸದಸ್ಯತ್ವ: ವಿಜಯಪುರ, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ ಹಾಗೂ ಮೈಸೂರು
  • ಏಕ ಸದಸ್ಯತ್ವ: ಬೀದರ್, ಕಲಬುರಗಿ, ಉತ್ತರಕನ್ನಡ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮೀಣ, ಕೋಲಾರ ಮತ್ತು ಕೊಡಗು.

ಯಾರ ಅಧಿಕಾರಾವಧಿ ಅಂತ್ಯ?

  • ಬಿಜೆಪಿ: ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ), ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕ), ಬಿ.ಜಿ.ಪಾಟೀಲ್, ಪ್ರದೀಪ್​ಶೆಟ್ಟರ್, ಸುನೀಲ್ ಸುಬ್ರಹ್ಮಣಿ, ಮಹಾಂತೇಶ ಕವಟಗಿಮಠ
  • ಕಾಂಗ್ರೆಸ್: ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ), ಪ್ರತಾಪಚಂದ್ರಶೆಟ್ಟಿ (ಮಾಜಿ ಸಭಾಪತಿ), ಶ್ರೀಕಾಂತ್ ಲಕ್ಷ್ಮಣ ಘೋಟ್ನೇಕರ್, ಶ್ರೀನಿವಾಸ ಮಾನೆ, ಧರ್ಮಸೇನ, ವಿಜಯಸಿಂಗ್, ಬಸವರಾಜ ಪಾಟೀಲ್ ಇಟಗಿ, ಕೆ.ಸಿ.ಕೊಂಡಯ್ಯ, ಆರ್.ಪ್ರಸನ್ನಕುಮಾರ್, ಗೋಪಾಲಸ್ವಾಮಿ, ಎಂ.ನಾರಾಯಣಸ್ವಾಮಿ, ಎಸ್.ರವಿ ಮತ್ತು ರಘು ಆಚಾರ್.
  • ಜೆಡಿಎಸ್​: ಎನ್.ಅಪ್ಪಾಜಿಗೌಡ, ಸಿ.ಆರ್.ಮನೋಹರ್, ಕಾಂತರಾಜು ಸುನೀಲ್​ಗೌಡ ಪಾಟೀಲ್.
  • ಪಕ್ಷೇತರ: ವಿವೇಕರಾವ್ ಪಾಟೀಲ್.

ಚುನಾವಣಾ ವೇಳಾಪಟ್ಟಿ

  • ನ. 16: ನಾಮಪತ್ರ ಸಲ್ಲಿಕೆ ಆರಂಭ
  • ನ. 23: ನಾಮಪತ್ರ ಸಲ್ಲಿಕೆಗೆ ಕೊನೇ ದಿನ
  • ನ. 24: ನಾಮಪತ್ರಗಳ ಪರಿಶೀಲನೆ
  • ನ. 26: ನಾಮಪತ್ರ ವಾಪಸ್​ಗೆ ಕೊನೇ ದಿನ
  • ಡಿ. 10: ಮತದಾನ (ಬೆಳಗ್ಗೆ 8-ಸಂಜೆ 4)
  • ಡಿ. 14: ಮತಗಳ ಎಣಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net