ದೇಶದ 334 ರಾಜಕೀಯ ಪಕ್ಷಗಳನ್ನು ತೆಗೆದು ಹಾಕಿದ ಚುನಾವಣಾ ಆಯೋಗ ; ಇದಕ್ಕೆ ಕಾರಣವೇನು? |Election Commission

election commission
Published on

Election Commission: 2019 ರಿಂದ ಆರು ವರ್ಷಗಳ ಕಾಲ ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯ ಷರತ್ತನ್ನು ಪೂರೈಸಲು ವಿಫಲವಾದ ಹಿನ್ನಲೆಯಲ್ಲಿ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ(ಆಗಸ್ಟ್ 9) ತಿಳಿಸಿದೆ.

ಈ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು RUPP (Registered Unrecognized Political Party) ದೇಶಾದ್ಯಂತ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿವೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷೆನ್ 29 A ಅಡಿಯಲ್ಲಿ, ಯಾವುದೇ ಪಕ್ಷ ಆರು ವರ್ಷಗಳಿಂದ ಲೋಕಸಭೆ,ವಿಧಾನಸಭೆ ಮತ್ತು ಉಪಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಅಂತಹ ಪಕ್ಷವನ್ನು ಪಟ್ಟಿಯಿಂದ ಹೊರಗಿಡಲಾಗುತ್ತದೆ. ಒಟ್ಟು 2,854 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಲ್ಲಿ, 2,520 ಪಕ್ಷಗಳು ಉಳಿದಿವೆ. ಪ್ರಸ್ತುತ, ಆರು ರಾಷ್ಟ್ರೀಯ ಪಕ್ಷಗಳು ಮತ್ತು 67 ರಾಜ್ಯ ಪಕ್ಷಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಜೂನ್‌ನಲ್ಲಿ, ಚುನಾವಣಾ ಪ್ರಾಧಿಕಾರವು ಅಂತಹ 345 ಪಕ್ಷಗಳ ವಿರುದ್ಧ ಕ್ರಮಗಳನ್ನು ಪ್ರಾರಂಭಿಸಿತ್ತು, ಅಂತಿಮವಾಗಿ ಅದರಲ್ಲಿ 334 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ.

2001 ರಿಂದ, ಚುನಾವಣಾ ಆಯೋಗವು ನಿಷ್ಕ್ರಿಯ RUPP ಗಳನ್ನು ಮೂರರಿಂದ ನಾಲ್ಕ ಬಾರಿ ತೆಗೆದುಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಒಮ್ಮೆ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ಯಾವುದೇ ಸಂಘವು, ತೆರಿಗೆ ವಿನಾಯಿತಿಗಳಂತಹ ಕೆಲವು ಸವಲತ್ತುಗಳನ್ನು ಪಡೆಯಬಹುದು ಎನ್ನಲಾಗಿದೆ.

ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಬಿಹಾರ ಚುನಾವಣೆಗೆ ಮುನ್ನ ಈ ಹೊಸ ನಡೆ ಬಂದಿದ್ದು, ಸದ್ಯ ಪಟ್ಟಿಯಿಂದ ಹೊರಬಿದ್ದ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net